ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ತಂಡ ಇನ್ನಿಂಗ್ಸ್ ಜೊತೆಗೆ 207 ರನ್ಗಳ ಜಯ ಸಾಧಿಸಿದೆ. ಶುಭಮನ್ ಗಿಲ್ ಶತಕದಾಟ ವ್ಯರ್ಥವಾಗಿದ್ದು, ಪಂಜಾಬ್ ಹೀನಾಯ ಸೋಲನುಭವಿಸಿದೆ. ಹೌದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣಜಿ ಟೂರ್ನಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಕರ್ನಾಟಕ ತಂಡ ಅಮೋಘ ಜಯ ಸಾಧಿಸಿದೆ.
ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ವೇಗದ ದಾಳಿ ಸಂಘಟಿಸಿದ ವಾಸುಕಿ ಕೌಶಿಕ್ 4 ವಿಕೆಟ್ ಪಡೆದರೆ, ಅಭಿಲಾಷ್ ಶೆಟ್ಟಿ 3 ವಿಕೆಟ್ ಕಬಳಿಸಿದರು. ಪರಿಣಾಮ ಪಂಜಾಬ್ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 55 ರನ್ಗಳಿಗೆ ಆಲೌಟ್ ಆಯಿತು.
ಇದರ ಬೆನ್ನಲ್ಲೇ ಪ್ರಥಮ ಇನಿಂಗ್ಸ್ ಆಡಿದ ಕರ್ನಾಟಕ ಪರ ಸ್ಮರಣ್ ರವಿಚಂದ್ರನ್ ಚೊಚ್ಚಲ ದ್ವಿಶತಕ ಸಿಡಿಸಿದರು. 277 ಎಸೆತಗಳನ್ನು ಎದುರಿಸಿದ ಸ್ಮರಣ್ 3 ಸಿಕ್ಸ್ ಹಾಗೂ 25 ಫೋರ್ಗಳೊಂದಿಗೆ 203 ರನ್ ಬಾರಿಸಿದರು. ಈ ಡಬಲ್ ಸೆಂಚುರಿ ನೆರವಿನಿಂದ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ 475 ರನ್ಗಳಿಸಿ ಆಲೌಟ್ ಆಯಿತು.
420 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಂಜಾಬ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಆಟಗಾರ ಪ್ರಭ್ಸಿಮ್ರಾನ್ ಸಿಂಗ್ 1 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ಅನ್ಮೋಲ್ಪ್ರೀತ್ ಸಿಂಗ್ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇದಾಗ್ಯೂ ಒಂದೆಡೆ ಕ್ರೀಸ್ ಕಚ್ಚಿ ಆಡಿದ ಶುಭ್ಮನ್ ಗಿಲ್ ಆಕರ್ಷಕ ಹೊಡೆತಗಳೊಂದಿಗೆ ಗಮನ ಸೆಳೆದರು. ಅಲ್ಲದೆ ತಂಡದ ಪರ ಏಕಾಂಗಿ ಹೋರಾಟ ನಡೆಸಿ ಸ್ಕೋರ್ ಅನ್ನು 150ರ ಗಡಿದಾಟಿಸಿದರು.
ಇದರ ನಡುವೆ 171 ಎಸೆತಗಳನ್ನು ಎದುರಿಸಿದ ಶುಭ್ಮನ್ ಗಿಲ್ 3 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 102 ರನ್ ಬಾರಿಸಿದರು. ಶತಕ ಬೆನ್ನಲ್ಲೇ ಗಿಲ್ ಅವರನ್ನು ಎಲ್ಬಿಡಬ್ಲ್ಯೂ ಮಾಡುವಲ್ಲಿ ಶ್ರೇಯಸ್ ಗೋಪಾಲ್ ಯಶಸ್ವಿಯಾದರು.
ಶುಭ್ಮನ್ ಗಿಲ್ ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕರ್ನಾಟಕ ಬೌಲರ್ಗಳು, ಅಂತಿಮವಾಗಿ ಪಂಜಾಬ್ ತಂಡವನ್ನು 213 ರನ್ಗಳಿಗೆ ಆಲೌಟ್ ಮಾಡಿದರು. ಈ ಮೂಲಕ ಕರ್ನಾಟಕ ತಂಡವು ಇನಿಂಗ್ಸ್ ಹಾಗೂ 207 ರನ್ಗಳ ಜಯ ಸಾಧಿಸಿದೆ.