ಬಳ್ಳಾರಿ,ನ.14: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲ್ಲೂಕು ಆಡಳಿತ ಸಂಡೂರು ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಇವರ ವತಿಯಿಂದ ಜಿಲ್ಲೆಯ ಗಡಿಭಾಗ ಗ್ರಾಮವಾದ ಶ್ರೀರಾಮಶೆಟ್ಟಿ ಹಳ್ಳಿಯಲ್ಲಿ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಗೆ ಮಂಗಳವಾರ ಅದ್ದೂರಿಯಾಗಿ ಸ್ವಾಗತ ದೊರೆಯಿತು.
ಹಲಗೆ, ತಾಷೆ-ರಾಂಡೋಲ್, ಕಂಸಾಳೆ, ವೀರಗಾಸೆ, ಡೊಳ್ಳು, ವಿವಿಧ ವಾದ್ಯಗಳು ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಭರ್ಜರಿ ಮೆರವಣಿಗೆಯೊಂದಿಗೆ ತಾಲ್ಲೂಕು ಆಡಳಿತವು ಅದ್ದೂರಿಯಾಗಿ ಬರಮಾಡಿಕೊಂಡರು. ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯ ಮೆರವಣಿಗೆಯಲ್ಲಿ ಅಧಿಕಾರಿಗಳು, ಶಾಲಾ ಮಕ್ಕಳು, ಸಾರ್ವಜನಿಕರು, ಹಿರಿಯರು-ಕಿರಿಯರು ಸೇರಿದಂತೆ ಸೇರಿದಂತೆ ಎಲ್ಲರೂ ಕುಣಿದು, ಕುಪ್ಪಳಿಸಿ, ನೃತ್ಯ ಮಾಡುವುದರ ಮೂಲಕ ಸಂಭ್ರಮದಿಂದ ಪಾಲ್ಗೊಂಡಿದ್ದರು.
ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯು ಸಂಡೂರು ತಾಲ್ಲೂಕಿನ ಶ್ರೀರಾಮ ಶೆಟ್ಟಿ ಹಳ್ಳಿಯಿಂದ ಬಂಡ್ರಿ ಗ್ರಾಮದ ಮೂಲಕ ಯಶವಂತ ನಗರ ಮಾರ್ಗವಾಗಿ ವಿವಿಧ ಹೋಬಳಿ, ಗ್ರಾಮ ಪಂಚಾಯತಿ ವತಿಯಿಂದ ಸಂಭ್ರಮದಿಂದ ಹೊರಟು, ಸಂಡೂರಿಗೆ ಆಗಮಿಸಿತು. ಸಂಡೂರು ಶಾಸಕ ಈ.ತುಕಾರಾಂ ಅವರು, ಅದ್ದೂರಿಯಾಗಿ ಬರಮಾಡಿಕೊಂಡರು. ನಂತರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಸಂಡೂರು ಶಾಸಕ ಈ.ತುಕಾರಾಂ ಅವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ, ಇಡೀ ವರ್ಷ ಕರ್ನಾಟಕದ ಇತಿಹಾಸ, ಕಲೆ, ಸಾಹಿತ ಸಂಸ್ಕøತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ – ಕನ್ನಡಿಗ – ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಅಂಗವಾಗಿ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಜ್ಯೋತಿ ರಥಯಾತ್ರೆಯು ರಾಜ್ಯಾದಾದ್ಯಂತ ಸಂಚರಿಸಲಿದೆ ಎಂದು ಹೇಳಿದರು.
1973ರಲ್ಲಿ ಮೈಸೂರು ರಾಜ್ಯ ಕರ್ನಾಟಕ ರಾಜ್ಯವೆಂದು ನಾಮಕರಣಗೊಂಡಿತು. ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸ್ ಅವರ ನೇತೃತ್ವದಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡಿತು ಎಂದು ತಿಳಿಸಿದರು. ಕರ್ನಾಟಕ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಈ ಶುಭಗಳಿಗೆ ಹೆಮ್ಮೆಯ ವಿಷಯವಾಗಿದೆ. ಅನೇಕ ಜನರ ತ್ಯಾಗ ಬಲಿದಾನ ಹಾಗೂ ಸಹಕಾರದಿಂದ ಕರ್ನಾಟಕ ರೂಪುಗೊಂಡಿದೆ ಎಂಬ ಸಂಗತಿಯನ್ನು ಯುವ ಸಮುದಾಯ ಅರಿತುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನುರಪ್ಪ, ತಹಶೀಲ್ದಾರ ಅನೀಲ್ ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಕರ್ನಾಟಕ ಸಂಭ್ರಮ – 50ರ ಜ್ಯೋತಿ ರಥಯಾತ್ರೆಯು ನ.15ರಂದು ಸಂಡೂರು ತಾಲ್ಲೂಕಿನಲ್ಲಿ ವಿವಿಧೆಡೆ ಸಂಚರಿಸಿ ನ 16ರಂದು ಬಳ್ಳಾರಿಗೆ ಆಗಮಿಸಲಿದೆ.