ಬೆಂಗಳೂರು: ಸಚಿವ ಜಮೀರ್ ಮಾತು ಮತ್ತು ನಡವಳಿಕೆ ಕಾಂಗ್ರೆಸ್ ಗೆ ಒಂದು ರೀತಿ ಇರಿಸುಮುರಿಸು ತರುವಂತಿದೆ. ಮೊದಲಿಗೆ ವಕ್ಫ್ ವಿಚಾರದಲ್ಲಿನ ಅವರ ನಡೆ. ಆ ಬಳಿಕ ಚನ್ನಪಟ್ಟಣ ಉಪಚುನಾವಣಾ ಕಣದಲ್ಲಿ ಕುಮಾರಸ್ವಾಮಿ ಕುರಿತಾದ ಕರಿಯಾ ಎಂಬ ಹೇಳಿಕೆಗೆ ಸ್ವಪಕ್ಷೀಯರೇ ಆಕ್ಷೇಪವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಚಿವ ಜಮೀರ್ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯವು ಕೇಳಿ ಬಂದಿದ್ದು, ಹೈಕಮಾಂಡ್ ಕೆಪಿಸಿಸಿ ಉಪಾಧ್ಯಕ್ಷ ಹುಸೇನ್ ಪತ್ರ ಬರೆದಿದ್ದಾರೆ. ಈತನ್ಮಧ್ಯೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಜಮೀರ್ ಮಾತಾಡಿದ್ದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಹೇಳಿಕೆ ಬೆನ್ನಲ್ಲೇ ಜಮೀರ್ ಮಾತಿನಿಂದ ಆಗಬಹುದಾದ ಹಾನಿ ಬಗ್ಗೆ ಕಾಂಗ್ರೆಸ್ಗೂ ಅರಿವಾದಂತಿದೆ. ಡಿಸಿಎಂ ಡಿಕೆಶಿ ಅವರ ಹೇಳಿಕೆಯೇ ಇದಕ್ಕೆ ನಿದರ್ಶನವಾಗಿದ್ದು, ಜಮೀರ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿವಕುಮಾರ್, ಜಮೀರ್ ಮಾತನಾಡಿದ್ದು ತಪ್ಪು ಎಂದಿದ್ದಾರೆ. ಆದರೆ ಜಮೀರ್ ಮಾತಾಡಿದ್ದನ್ನು ತಪ್ಪು ಅಂತ ಅಂಗೀಕರಿಸಿರುವ ಅವರು ಶಿಸ್ತುಕ್ರಮ ಜರುಗಿಸಲಾಗುತ್ತದೆಯೇ ಇಲ್ಲವೇ ಅಂತ ಬಹಿರಂಗಪಡಿಸಲಾಗದು ಎಂದು ಹೇಳಿದರು. ಒಟ್ಟಾರೆ ಈ ಎಲ್ಲಾ ವಿದ್ಯಮಾನಗಳ ನೋಡುತ್ತಿದ್ರೆ ಜಮೀರ್ ಗೆ ಸಂಚಕಾರ ಕಾದಿರುವುದು ನಿಶ್ಚಿತ ಎನ್ನುವ ಚರ್ಚೆ ಶುರುವಾಗಿದೆ.