ಮೊನ್ನೆಯಷ್ಟೇ ರಿಲೀಸ್ ಆಗಿರುವ ಕಾಂತಾರ (Kantara) ಚಾಪ್ಟರ್ 1 ಸಿನಿಮಾದ ಟೀಸರ್ (Teaser) ಕೋಟಿ ಕೋಟಿ ವಿವ್ಸ್ಯೂ ಪಡೆಯುತ್ತಿದೆ. ಟೀಸರ್ ನೋಡಿದ ಭಾರತವೇ ಬೆಚ್ಚಿ ಬಿದ್ದಿದೆ. ಟೀಸರ್ ನಲ್ಲಿ ತೋರಿಸಲಾದ ಆಶಯ ಮತ್ತು ರಿಷಬ್ ಶೆಟ್ಟಿ ಕಂಡು ದಕ್ಷಿಣದ ಬಹುತೇಕ ಸ್ಟಾರ್ ನಟರು ಫಿದಾ ಆಗಿದ್ದಾರೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಕಲಾವಿದರು ಮೆಚ್ಚಿ ಶುಭ ಹಾರೈಸಿದ್ದಾರೆ
ಕಳೆದ ವರ್ಷ ಬಿಡುಗಡೆಯಾಗಿ ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುವುದರ ಜೊತೆಗೆ ದೊಡ್ಡ ಯಶಸ್ಸು ಕಂಡ ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಈಗ ಇನ್ನೊಂದು ಅಂಥದ್ದೇ ಪ್ರಯತ್ನದೊಂದಿಗೆ ವಾಪಸಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ಚಿತ್ರವಾದ ‘ಕಾಂತಾರ – ಅಧ್ಯಾಯ 1’ ರ (Kantara Chapter 1) ಮೊದಲ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ವೀಕ್ಷಣೆಗೆ ಸಾಕ್ಷಿಯಾಗಿತ್ತು.
‘ಕಾಂತಾರ’ ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಬ್ ಶೆಟ್ಟಿ (Rishabh Shetty) ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತಿದೆ. ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ.
ಮೊದಲ ಭಾಗದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಸಂಗೀತವು ಈ ಟೀಸರ್ ಮೂಲಕ ವಾಪಸ್ಸಾಗಿದೆ. ಈ ಟೀಸರ್ ನ ವೈಷಿಷ್ಟ್ಯವೆಂದರೆ, ಚಿತ್ರವು ಏಳು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರತಿಯೊಂದು ಭಾಷೆಯ ಟೀಸರ್ ಒಂದೊಂದು ರಾಗದ ಮೂಲಕ ಅಂತ್ಯವಾಗಲಿದೆ.