ಕೆಎಲ್ ರಾಹುಲ್ ಅವರನ್ನು ಟೆಸ್ಟ್ ಕೀಪರ್ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾತ್ರವಲ್ಲದೆ ವಿಕೆಟ್ ಕೀಪಿಂಗ್ ನಲ್ಲಿಯೂ ಕೆಎಲ್ ರಾಹುಲ್ ಅವರು ತಮ್ಮ ಕೌಶಲದಿಂದ ಮಿಂಚಿದ್ದರು.
ಆದರೆ ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ನಡೆಸುವುದಿಲ್ಲ. ಅವರು ಸ್ಪೆಷಲಿಸ್ಟ್ ಬ್ಯಾಟರ್ ಆಗಿ ತಂಡದಲ್ಲಿ ಆಡಲಿದ್ದಾರೆ ಎನ್ನಲಾಗಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಮತ್ತು ತಂಡದ ಮ್ಯಾನೇಜ್ ಮೆಂಟ್ ಮುಂಬರುವ ಸರಣಿಯಲ್ಲಿ ತಜ್ಞ ವಿಕೆಟ್-ಕೀಪರ್ ಕೆಎಸ್ ಭರತ್ ಅವರತ್ತ ಎದುರು ನೋಡುತ್ತಿದೆ.
ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ಗಳಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಿದೆ. ಕೆಎಸ್ ಭರತ್ ಮತ್ತು ಧ್ರುವ್ ಜುರೆಲ್ ಅವರನ್ನು ವಿಕೆಟ್-ಕೀಪರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಜುರೆಲ್ ಅವರು ಇದೇ ಮೊದಲ ಬಾರಿಗೆ ಟೆಸ್ಟ್ ಕರೆ ಪಡೆದಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಸ್ಪಿನ್ ಸ್ನೇಹಿ ತವರು ಪಿಚ್ ಗಳಲ್ಲಿ ವಿಕೆಟ್ ಕೀಪರ್ ಪಾತ್ರಕ್ಕೆ ರಾಹುಲ್ ಸೂಕ್ತ ಎಂದು ಬಿಸಿಸಿಐ ಭಾವಿಸುವುದಿಲ್ಲ, ಆದ್ದರಿಂದ ಇಬ್ಬರು ತಜ್ಞರನ್ನು ಆಯ್ಕೆ ಮಾಡಲಾಗಿದೆ.