ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು ಮಂಡ್ಯ ನಗರವನ್ನು ಮದುವಣಗಿತ್ತಿಯಂತೆ ಸಿಂಗಾರಗೊಳಿಸಬೇಕು. ಎಲ್ಲಿ ನೋಡಿದರೂ ಕನ್ನಡದ ಬಾವುಟಗಳು ರಾರಾಜಿಸುವ ಮೂಲಕ ಮಂಡ್ಯ ನಗರ ಸಂಪೂರ್ಣ ಕನ್ನಡಮಯವಾಗಿ ಕಂಗೊಳಿಸಬೇಕು ಎಂದು ಶಾಸಕರು ಹಾಗೂ ನಗರ ಅಲಂಕಾರ ಸಮಿತಿ ಅಧ್ಯಕ್ಷರಾದ ರವಿಕುಮಾರ್ ಅವರು ಹೇಳಿದರು.
ಸ್ನಾನಕ್ಕೆ ಗೀಸರ್ ಬಳಸುವಾಗ ಎಚ್ಚರ! ಸ್ವಲ್ಪ ಯಾಮಾರಿದ್ರೂ ಸ್ಪೋಟ ಗ್ಯಾರಂಟಿ!
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಗರ ಅಲಂಕಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ರಸ್ತೆಗಳು, ಸರ್ಕಲ್ ಗಳಲ್ಲಿ ಹಾಗೂ ಮನೆಮನೆಗಳ ಮೇಲೂ ಕನ್ನಡದ ಬಾವುಟ ಹಾರಾಡಬೇಕು. ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸುವ ಕಾರ್ಯಕ್ರಮಕ್ಕೆ ಡಿ.6 ಅಥವಾ 7ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಗುವುದು ಎಂದರು.
ನಗರದಲ್ಲಿನ ಸುಮಾರು 20 ಸಾವಿರಕ್ಕೂ ಹೆಚ್ಚು ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲಾಗುವುದು. ಇದರ ಜೊತೆಗೆ ಪ್ರಮುಖ ಸರ್ಕಲ್, ರಸ್ತೆಗಳ ಅಕ್ಕಪಕ್ಕ, ವಾಣಿಜ್ಯ ಮಳಿಗೆಗಳ ಮೇಲೂ ಕನ್ನಡ ಬಾವುಟ ಹಾರಿಸಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.
ಈ ತಿಂಗಳ ಪೂರ್ತಿ ಕನ್ನಡದ ಬಾವುಟ ಹಾರಾಡಲಿದೆ. ಇನ್ನೂ ಹತ್ತು ದಿನದೊಳಗೆ ನಗರದೆಲ್ಲೆಡೆ ಕನ್ನಡದ ಬಾವುಟಗಳು ರಾರಾಜಿಸಬೇಕು. ಮೆರವಣಿಗೆ ಸಾಗುವ ಮಾರ್ಗದ ಸರ್ಕಲ್ ಗಳನ್ನು ಪುಷ್ಪಾಲಂಕಾರದಿಂದ ಸಿಂಗರಿಸಬೇಕು. ರಸ್ತೆಗಳು ತಳಿರು ತೋರಣದಿಂದ ಕಂಗೊಳಿಸಬೇಕು. ಗೋಡೆಗಳ ಮೇಲೆ ಕೆಂಪು ಹಳದಿ ಬಣ್ಣದ ಚಿತ್ರಾಲಂಕಾರ ಮೂಡಿಸಬೇಕು ಎಂದು ಹೇಳಿದರು.
ನಗರದಲ್ಲಿ ದೀಪಾಲಂಕಾರವನ್ನು ಚೆಸ್ಕಾಂನವರೇ ವಹಿಸಿಕೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಪ್ರತಿ ಮಳಿಗೆಗಳ ವ್ಯಾಪಾರಸ್ಥರಿಗೆ ಕನ್ನಡದ ಶಾಲು ವಿತರಣೆ ಮಾಡಿ ಸಾಹಿತ್ಯ ಸಮ್ಮೇಳನದ ಕುರಿತು ಪ್ರಚಾರ ಮಾಡುವಂತೆ ಮನವಿ ಮಾಡಬೇಕು. ಈ ಸಂಬಂಧ ನಗರಸಭೆ ವತಿಯಿಂದ ಕರಪತ್ರಗಳನ್ನು ಮುದ್ರಿಸಿ ಹಂಚಬೇಕು. ವ್ಯಾಪಾರಿಗಳು, ಸಾರ್ವಜನಿಕರು ಮನೆಯ ಹಬ್ಬದ ರೀತಿಯಲ್ಲಿ ಸಾಹಿತ್ಯ ಸಮ್ಮೇಳನ ಆಚರಿಸಿದಾಗ ಸಮ್ಮೇಳನ ಯಶಸ್ವಿ ಆಗಲಿದೆ ಎಂದರು.
ಡಿ.18ರಂದು ಶಾಲಾ, ಕಾಲೇಜು ಮಕ್ಕಳಿಂದ ‘ಕನ್ನಡಕ್ಕಾಗಿ ಓಟ’ ಎಂಬ ಘೋಷವಾಕ್ಯದೊಂದಿಗೆ ಮ್ಯಾರಥಾನ್ ಹಮ್ಮಿಕೊಳ್ಳಲಾಗುವುದು. ಗ್ರಾಮ ಪಂಚಾಯತಿ ಕಚೇರಿಗಳ ಮೇಲೂ ಕನ್ನಡ ಬಾವುಟ ಹಾರಿಸುವುದರ ಜೊತೆಗೆ ಕಟ್ಟಡವನ್ನು ಲೈಟಿಂಗ್ ನಿಂದ ಸಿಂಗರಿಸುವ ಕೆಲಸವಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷರಾದ ಪ್ರಕಾಶ್ ಎಂ.ವಿ, ನಗಾರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಯೀಮ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಚಾಲಕರಾದ ಮೀರಾ ಶಿವಲಿಂಗಯ್ಯ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ತಗ್ಗಹಳ್ಳಿ ವೆಂಕಟೇಶ್, ನಗರಸಭೆ ಪೌರಾಯುಕ್ತರಾದ ಪಂಪಶ್ರೀ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರವಿಕುಮಾರ್, ವಿಕಲಚೇತನರ ಇಲಾಖೆ ಅಧಿಕಾರಿ ಕೋಮಲ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.