ಬೆಂಗಳೂರು: ಕೇಂದ್ರ ಪಠ್ಯಕ್ರಮ ಬೋಧಿಸುತ್ತಿರುವ ಎಲ್ಲ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯಾಗಿ ಬೋಧಿಸುವುದನ್ನು ಕಡ್ಡಾಯಗೊಳಿಸಿ ನಿಯಮಾವಳಿಗಳಿಗೆ ತಿದ್ದುಪಡಿ ತಂದು ರಾಜ್ಯ ಸರ್ಕಾರ ರಾಜ್ಯಪತ್ರ ಹೊರಡಿಸಿದೆ. ಸಿಬಿಎಸ್ಇ, ಐಸಿಎಸ್ಇ ಮತ್ತು ಅಂತಾರಾಷ್ಟ್ರೀಯ ಮಂಡಳಿ(ಐಬಿ) ಸೇರಿದಂತೆ ಕೇಂದ್ರೀಯ ಪಠ್ಯಕ್ರಮದ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಿಗೂ ಇದು ಅನ್ವಯಿಸಲಿದೆ.
2015ರ ಕನ್ನಡ ಭಾಷಾ ಕಲಿಕೆ ಕಾಯಿದೆಯು ಕರ್ನಾಟಕ ಶಿಕ್ಷಣ ಕಾಯಿದೆಯ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ನಿರಾಕ್ಷೇಪಣಾ ಪತ್ರ ಮತ್ತು ನಿಯಂತ್ರಣ) ನಿಯಮ- 2022ರ ತಿದ್ದುಪಡಿ ತಂದು ಪ್ರಕಟಿಸಿದ್ದ ಕರಡಿಗೆ ಯಾವುದೇ ಆಕ್ಷೇಪಣೆಗಳು ಬಂದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾಇತರೆ ಪಠ್ಯಕ್ರಮಗಳ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಈ ಮೊದಲಿದ್ದಂತೆ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಬೋಧಿಸುವುದನ್ನು ಕಡ್ಡಾಯಗೊಳಿಸಿದೆ. ಇನ್ಮೇಲೆ ಈ ನಿಯಮ ಅನುಸರಿಸಿದರೆ ಮಾತ್ರ ಖಾಸಗಿ ಶಾಲೆಗಳನ್ನು ನಡೆಸಲು ರಾಜ್ಯ ಸರ್ಕಾರ ನಿರಾಕ್ಷೇಪಣಾ ಪತ್ರ ದೊರೆಯಲಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಈ ಹಿಂದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿಯೇ ಬೋಧಿಸಬೇಕೆಂಬ ನಿಯಮ ಇತ್ತು. ಬಳಿಕ ಇದನ್ನು ತಿದ್ದುಪಡಿ ಮಾಡಿ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಬೋಧಿಸಲು ಕರಡು ನಿಯಮಾವಳಿ ರೂಪಿಸಿ 2022ರ ಮೇ 13ರಂದು ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಶಿಕ್ಷಣ ತಜ್ಞರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಎಲ್ಲ ಕಡೆಯಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು.
ಬಳಿಕ ಮತ್ತೆ ಈ ನಿಯಮಾವಳಿಗೆ ತಿದ್ದುಪಡಿ ಮಾಡಿ ಕರಡು ನಿಯಮಾವಳಿಯನ್ನು ಕಳೆದ ಮಾರ್ಚ್ನಲ್ಲಿ ಪ್ರಕಟಿಸಿ ಆಕ್ಷೇಪಣೆಗೆ ಅವಕಾಶ ನೀಡಲಾಗಿತ್ತು. ಯಾವುದೇ ಆಕ್ಷೇಪಗಳು ಬಾರದ ಹಿನ್ನೆಲೆಯಲ್ಲಿ ಮೊದಲಿನಂತೆಯೇ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಲಿಸಬೇಕೆಂದು ಅಧಿಕೃತ ರಾಜ್ಯಪತ್ರ ಹೊರಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)