ಕಲಘಟಗಿ :ತಾಲೂಕಿನ ಸರಕಾರಿ ನೌಕರರ ಸಂಘಟನೆಯ ನೂತನ ಕಟ್ಟಡ ಸಂಕೀರ್ಣವನ್ನು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಉಧ್ಘಾಟಿಸಿ ಮಾತನಾಡಿದರು.
ಮಹಿಳೆಯರೇ, ನೈಸರ್ಗಿಕವಾಗಿ ಮುಖದ ಮೇಲಿನ ಕೂದಲನ್ನು ತೆಗೆಯಲು ಇಲ್ಲಿದೆ ಟಿಪ್ಸ್!
ನೌಕರರ ಸಂಘಟನೆಗಳು ಸದಾ ಕೆಳ ವರ್ಗದ ಸಿ ಮತ್ತು ಡಿ ದರ್ಜೆ ನೌಕರರನ್ನು ಒಳಗೊಂಡಂತೆ ಮಹಿಳಾ ನೌಕರರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಹೆಚ್ಚಿನ ಮುತುವರ್ಜಿ ವಹಿಸಿ ಶೀಘ್ರ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.
ಪಟ್ಟಣದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘಟನೆಯ ತಾಲೂಕು ಘಟಕದ ಸರಕಾರಿ ನೌಕರರ ಭವನದ ನೂತನ ಕಟ್ಟಡ ಸಂಕೀರ್ಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಕ್ಲಾಸ್ 1 ಕ್ಲಾಸ್ 2 ದರ್ಜೆಯ ಹಿರಿಯ ಅಧಿಕಾರಿಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುವ ಶಕ್ತಿ ಹಾಗೂ ಜಾಣ್ಮೆಯನ್ನು ಹೊಂದಿರುತ್ತಾರೆ. ಆದರೆ ಕೆಳ ವರ್ಗದ ನೌಕರರು ಸಮಸ್ಯೆಗಳ ಸಂಕೋಲೆಯಿಂದ ಹೊರ ಬರಲು ಹೆಣಗಾಡುತ್ತಿರುತ್ತಾರೆ. ಕಾರಣ ಸಂಘಟನೆಗಳು ಸದಾ ಅವರೆಲ್ಲರ ಬೆಂಗಾವಲಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ತಾಲೂಕಾ ಅಧ್ಯಕ್ಷ ಆರ್.ಎಮ್.ಹೊಲ್ತಿಕೋಟಿ ಪ್ರಾಸ್ಥಾವಿಕವಾಗಿ ಮಾತನಾಡಿ, ನೌಕರ ವರ್ಗದವರಿಗೆ ಹೊರೆಯಾಗದಂತೆ ಜನಪ್ರತಿನಿಧಿಗಳು ಮತ್ತು ಸರಕಾರದಿಂದ ಸುಮಾರು 60 ಲಕ್ಷ ರೂ.ಗಳ ಹಣದ ಕ್ರೋಢೀಕರಣ ಮಾಡಿ ಸರಕಾರಿ ನೌಕರರ ಸಂಘಟನೆಯ ಕಟ್ಟಡ ಸಂಕೀರ್ಣವನ್ನು ನಿರ್ಮಿಸಿ ತಾಲೂಕು ಕೇಂದ್ರ ಸ್ಥಳದಲ್ಲಿ ಅತಿ ಅವಶ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳುಳ್ಳ ಅಂದಾಜು 70 ಲಕ್ಷಕ್ಕೂ ಮಿಕ್ಕಿದ ಮೌಲ್ಯಯುತ ಒಂದು ಸಭಾಂಗಣ ಸಂಕೀರ್ಣವನ್ನು ಸಮೂದಾಯಕ್ಕೆ ಒದಗಿಸಿದ ಆತ್ಮ ತ್ರಪ್ತಿ ತಮಗೆ ವಯಕ್ತಿಕವಾಗಿ ಹಾಗೂ ತಮ್ಮ ಇಂದಿನ ಸಂಘಟನೆಗಿದೆ ಎಂದು ಸಂತ್ರಪ್ತ ಮನೋಭಾವನೆಯನ್ನು ವ್ಯಕ್ತ ಪಡಿಸಿದರು.
ಅಲ್ಲದೇ ವಸ್ತು ರೂಪದಲ್ಲಿ ಹಾಗೂ ಹಣದ ರೂಪದಲ್ಲಿ ದಾನಿಗಳನೇಕರಿಂದ ಲಕ್ಷಾಂತರ ರೂ.ಗಳ ದೇಣಿಗೆ ಹರಿದು ಬಂದಿದ್ದು ಅದರಿಂದಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಸಂಘಟನೆಗೆ ನಿರಂತರ ಹಣದ ಹರಿವಿನ ರೂಪದಲ್ಲಿ ಮುಂದಿನ ಅಭಿವೃದ್ಧಿಗೆ ಹಣ ಕ್ರೋಢೀಕರಣಗೊಳ್ಳಲಿದೆ. ನೌಕರ ಸಂಘಟನೆಯ ಎಲ್ಲ ಪದಾಧಿಕಾರಿಗಳು, ಸಮಿತಿ ಸದಸ್ಯರುಗಳು ಹಾಗೂ ತಾಲೂಕಿನ ಎಲ್ಲ ಇಲಾಖಾ ಅಧಿಕಾರಿಗಳು ಮತ್ತು ನೌಕರರ ನಿಸ್ವಾರ್ಥ ಮನೋಭವನೆಯ ಸಹಕಾರವೇ ಇದೆಲ್ಲ ಅಭಿವೃದ್ಧಿ ಕೆಲಸಗಳಿಗೆ ಕಾರಣವಾಗಿದೆ ಎಂದು ಹೇಳಿ ತಮ್ಮ ತಾಲೂಕು ಸಂಘಟನೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲಾಗಿದೆ ಎಂದರು.
ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ಧನಗೌಡ್ರ ಮಾತನಾಡಿ ತಾಲೂಕು ಸಂಘಟನೆಯ ಪದಾಧಿಕಾರಿಗಳನ್ನು ಕಂಠಪೂರ್ತಿ ಶ್ಲಾಘಿಸಿ ಇಲ್ಲಿನ ಸಂಘಟನಾತ್ಮಕ ಹಾಗೂ ನಿಸ್ವಾರ್ಥ ಮನೋಭಾವನೆಯ ಸೇವಾ ಕಾರ್ಯ ಎಲ್ಲ ಸಂಘಟನೆಗಳವರಿಗೂ ಅನುಕರಣೀಯವಾಗಿದ್ದು ಆದರ್ಶಪ್ರಾಯವಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಸಚಿವರ ಆಪ್ತ ಕಾರ್ಯದರ್ಶಿ ಸೋಮಶೇಖರ ಬೆನ್ನೂರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ, ಶಿರಸ್ತೇದಾರ ಬಸವರಾಜ ಅಂಗಡಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ವಾಯ್.ಆಸಂಗಿ, ವಲಯ ಅರಣ್ಯಾಧಿಕಾರಿ ಅರುಣಕುಮಾರ ಅಷ್ಟಗಿ, ಅಬಕಾರಿ ನಿರೀಕ್ಷಕ ಅಮೀತ ಬೆಳ್ಳುಬ್ಬಿ, ಈಶ್ವರಪ್ಪ ಜವಳಿ, ಆರ್.ಎಸ್.ಜಂಬಗಿ ಸೇರಿದಂತೆ ಎಲ್ಲ ಇಲಾಖೆಗಳವರು ಉಪಸ್ಥಿತರಿದ್ದರು. ಬಸವರಾಜ ಉಳ್ಳೇಗಡ್ಡಿ ನಿರೂಪಿಸಿದರು. ರಾಜು ಲಮಾಣಿ ಸ್ವಾಗತಿಸಿದರು. ನವೀನ ಗುಳೇರ ವಂದಿಸಿದರು.