ಮಂಡ್ಯ:- ವಿವಿಗಳಿಂದ ಲಾಭವಿಲ್ಲ ಎಂಬ ಕಾಂಗ್ರೆಸ್ ಸರ್ಕಾರದ ಹೇಳಿಕೆಗೆ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆ ; ಬಬಲಾದಿಯ ಸದಾಶಿವ ಮುತ್ಯಾ ಭವಿಷ್ಯ
ಈ ಸಂಬಂಧ ಮಾತನಾಡಿದ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಶಿಕ್ಷಣದಲ್ಲಿ ಹಿಂದುಳಿದಿದೆ. ಇದಕ್ಕಾಗಿ ಬಿಜೆಪಿ ಸರ್ಕಾರ ಹೊಸ 9 ವಿಶ್ವವಿದ್ಯಾಲಯಗಳನ್ನು ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು ಕಿತ್ತುಕೊಂಡಿದೆ. ವಿವಿಗಳನ್ನು ಮುಚ್ಚಲು ರೂಪಿಸಿದ ವರದಿಯಲ್ಲಿ ವಿವಿಗಳು ಲಾಭದಾಯಕವಾಗಿಲ್ಲ ಎಂದು ಉಲ್ಲೇಖಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಂದಲೂ ಆದಾಯ ಬರಬೇಕು ಎಂಬುದು ಸರ್ಕಾರದ ಉದ್ದೇಶ ಏಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಭಿಕ್ಷೆ ಬೇಡುತ್ತಿದ್ದಾರೆ. ಈ ಬಾರಿ 1 ಲಕ್ಷ ಕೋಟಿ ರೂ. ಸಾಲ ಮಾಡಲಾಗಿದೆ. ಹಿಂದಿನ ಎಲ್ಲ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರೇ ಅತ್ಯಧಿಕ ಸಾಲ ಮಾಡಿದ್ದಾರೆ ಎಂದು ದೂರಿದರು.
ಶಿಕ್ಷಣ ಎಂದರೆ ವ್ಯಾಪಾರವಲ್ಲ, ಅದು ನಮ್ಮ ದೇಶದ ಆಸ್ತಿ. ಮುಚ್ಚಿರುವ ಬಾರ್ಗಳನ್ನು ತೆರೆದು, ವಿವಿಗಳನ್ನು ಮುಚ್ಚಲಾಗುತ್ತಿದೆ. ಎಲ್ಲ ವಿವಿಗಳನ್ನು ನಡೆಸಲು 252 ಕೋಟಿ ರೂ. ಇದ್ದರೆ ಸಾಕು. ಉಚಿತವಾಗಿ 2 ಸಾವಿರ ರೂ. ನೀಡಿ ವಿವಿಗಳನ್ನು ಮುಚ್ಚುತ್ತೇವೆ ಎಂದರೆ ಗ್ಯಾರಂಟಿಗೆ ಬೆಲೆ ಇರುವುದಿಲ್ಲ. ಬಿಜೆಪಿ ಸರ್ಕಾರ ವಿಶ್ವವಿದ್ಯಾಲಯಗಳನ್ನು ರೂಪಿಸಿದಾಗ ಹೊಸ ಹುದ್ದೆಗಳನ್ನು ಸೃಷ್ಟಿ ಮಾಡಿರಲಿಲ್ಲ. ಇರುವ ಸಿಬ್ಬಂದಿಯನ್ನೇ ನೇಮಕ ಮಾಡಲಾಗಿತ್ತು. ವಿಶ್ವವಿದ್ಯಾಲಯ ಮುಚ್ಚುವುದರಿಂದ ಲಾಭವಾಗುತ್ತದೆಯೋ? ನಷ್ಟವಾಗುತ್ತದೆಯೋ? ಎಂಬುದು ಬೇಕಿಲ್ಲ. ಇದರಿಂದ ಮಕ್ಕಳಿಗೆ ಏನು ತೊಂದರೆಯಾಗುತ್ತದೆ? ಎಂಬ ಬಗ್ಗೆ ಸರ್ಕಾರ ಸ್ಪಷ್ಟಪಡಿಸಲಿ. ನೀರಿಗಾಗಿ ಹೋರಾಟ ಮಾಡುವಂತೆಯೇ, ವಿದ್ಯೆಗಾಗಿ ಮಂಡ್ಯದ ಜನರು ಹೋರಾಟ ಮಾಡಲಿದ್ದಾರೆ. ಸರ್ಕಾರದ ಬಳಿ ಹಣವಿಲ್ಲವೆಂದರೆ ಅದನ್ನು ನೇರವಾಗಿ ಹೇಳಲಿ. ನಾವೆಲ್ಲರೂ ಹಣ ಸಂಗ್ರಹಿಸಿ ವಿಶ್ವವಿದ್ಯಾಲಯ ನಡೆಸುತ್ತೇವೆ ಎಂದರು.