ಬೆಳಗಾವಿ:- ವೃತ್ತಿ ಘನತೆಯನ್ನು ಪತ್ರಕರ್ತರು ಎತ್ತಿ ಹಿಡಿಯಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಪತ್ರಿಕಾರಂಗವು ಸಮಾಜ ತಿದ್ದುವ ಪಾತ್ರ ನಿರ್ವಹಿಸುತ್ತಿದೆ. ಸಮಾಜದಲ್ಲಿ ತೊಂದರೆ, ಸಮಸ್ಯೆಗಳಿದ್ದಲ್ಲಿ ಅಂತಹ ಕಡೆ ಬೆಳಕು ಚೆಲ್ಲುವ ಕೆಲಸಕ್ಕೆ ಮಾಧ್ಯಮ ಮುಂದಾಗಬೇಕು. ಪತ್ರಕರ್ತರು ತಮ್ಮ ವರದಿಗಳಿಂದ ವೃತ್ತಿ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಿವಿಮಾತು ಹೇಳಿದರು.
ಇಂದಿನ ಎಲೆಕ್ಟ್ರಾನಿಜ್ ಹಾಗೂ ಡಿಜಿಟಲ್ ಮಾಧ್ಯಮಗಳು ಸುದ್ದಿ ಭರಾಟೆ ಹೆಚ್ಚಾಗಿದ್ದು, ಮೂಲ ಸುದ್ದಿಯ ಸ್ವರೂಪವೇ ಬದಲಾಗಿ ಕೆಲವೊಮ್ಮೆ ಬೇರೆಯದೇ ಅರ್ಥ ಮೂಡಿಸುತ್ತಿದೆ. ಆದ್ದರಿಂದ ಮೂಲ ಸುದ್ದಿ ಅಥವಾ ಹೇಳಿಕೆಗಳು ಯಥಾವತ್ತಾಗಿ ವರದಿಯಾಗಬೇಕು ಎಂದು ಹೇಳಿದರು.
ಪತ್ರಕರ್ತರು ತಮ್ಮ ಕುಟುಂಬ ಮಕ್ಕಳ ವಿದ್ಯಾಭ್ಯಾಸಗಳತ್ತ ಗಮನಹರಿಸಬೇಕು. ಬೆಳಗಾವಿ ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಜತೆಗೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದೆ. ಸ್ಥಳ ಗೊಂದಲವಿರುವ ಕಾರಣ ವಿಳಂಬವಾಗಿದೆ. ಸ್ಥಳ ನಿಗದಿಯಾದ ತಕ್ಷಣವೇ ಭವನ ನಿರ್ಮಾಣಕ್ಕೆ ಸೂಚಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು