ಗೀತ ಸಾಹಿತಿ ಜಾವೇದ್ ಅಖ್ತರ್ ತಮ್ಮ ಹೇಳಿಕೆಗಳ ಮೂಲಕ ಆಗಾಗ ಸುದ್ದಿ ಆಗುತ್ತಾ ಇರುತ್ತಾರೆ. ಹನಿ ಇರಾನಿ ಅವರನ್ನು 1972ರಲ್ಲಿ ಮದುವೆ ಆದ ಜಾವೇದ್ ಅಖ್ತರ್ 11 ವರ್ಷಗಳ ಬಳಿಕ ದೂರ ಆದರು. ದಶಕಗಳ ಕಾಲ ಒಟ್ಟಾಗಿ ಸಂಸಾರ ನಡೆಸಿದ್ದ ಇವರು ಬೇರೆ ಆದರು. ಈ ಸಂಬಂಧ ಮುರಿದು ಬೀಳಲು ಮದ್ಯ ಪಾನ ವ್ಯಸನವೇ ಕಾರಣ ಎಂದಿರುವ ಜಾವೇದ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ.
ನಾನು ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸುತ್ತೇನೆ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ. ‘ನಾನು ಏಕರೂಪ ನಾಗರಿಕ ಸಂಹಿತೆಯನ್ನು ಪಾಲಿಸುತ್ತಿದ್ದೇನೆ. ನಾನು ಒಬ್ಬರನ್ನು ಮದುವೆ ಆದೆ. 11 ವರ್ಷ ಒಟ್ಟಿಗೆ ಸಂಸಾರ ನಡೆಸಿದೆವು. ನಂತರ ವಿಚ್ಛೇದನ ಪಡೆದೆವು. ಮುಸ್ಲಿಂ ಕಾನೂನಿನ ಪ್ರಕಾರ ಅವಳಿಗೆ ಕೇವಲ ನಾಲ್ಕು ತಿಂಗಳ ಜೀವನಾಂಶ ಕೊಡುವ ಜವಾಬ್ದಾರಿ ನನ್ನ ಮೇಲಿತ್ತು. ಆದರೆ ನಾನು ಯೋಚಿಸಲಿಲ್ಲ. ಅವಳು ನನ್ನ ಜವಾಬ್ದಾರಿ. ಅವಳಿಗೆ ನನ್ನ ಬೆಂಬಲ ಬೇಕೋ ಅಥವಾ ಬೇಡವೋ ಎಂದು ನಿರ್ಧರಿಸುವ ಜವಾಬ್ದಾರಿ ಕೂಡ ಅವರದ್ದೇ’ ಎಂದಿದ್ದಾರೆ ಜಾವೇದ್ ಅಖ್ತರ್.
‘ಅವಳಿಗೆ ನನ್ನಿಂದ ಸಹಾಯ ಬೇಕಿದ್ದರೆ ನಾನು ಸಹಾಯಕ್ಕೆ ನಿಲ್ಲುತ್ತೇನೆ. ನಾನು ನಾಲ್ಕು ಪುಸ್ತಕ ಹಾಗೂ ಬಟ್ಟೆ ಹಿಡಿದು ಮನೆಯಿಂದ ಹೊರ ನಡೆದೆ ಎಂದಿರುವ ಜಾವೇದ್, ನಮ್ಮ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ’ ಎಂದಿದ್ದಾರೆ.
‘ನಾನು 20ನೇ ವಯಸ್ಸಿಗೆ ಕುಡಿಯಲು ಆರಂಭಿಸಿದೆ. ನನಗೆ ಆಗ 42 ವರ್ಷ ಎಂದು ಭಾಸಾವಾಗಲು ಆರಂಭ ಆಯಿತು. ನಾನು ಬಾಟಲಿ ಖರೀದಿಸಿ, ಪ್ರತಿ ರಾತ್ರಿ ಕುಡಿಯುತ್ತಿದ್ದೆ. ಉರ್ದು ಕವಿಗಳು ದೊಡ್ಡ ಕುಡುಕರಾಗುವುದು ತುಂಬಾನೇ ಸಾಮಾನ್ಯ. ಅವರು ನಿರಾತಂಕಗಿಗಳಾಗಿರಬೇಕು ಮತ್ತು ಕುಡಿಯಬೇಕು ಎಂದು ಅವರು ನಂಬುತ್ತಾರೆ. ನಾನು ಆ ತಪ್ಪು ಮೌಲ್ಯಗಳನ್ನು ಹೊಂದಿದ್ದೆ’ ಎಂದಿದ್ದಾರೆ ಜಾವೇದ್ ಅಖ್ತರ್.
‘ಮುಸ್ಲಿಮರಿಗೆ ನಾಲ್ಕು ಹೆಂಡತಿಯರನ್ನು ಹೊಂದುವ ಹಕ್ಕಿದೆ. ಇದರಿಂದ ಇತರರಿಗೆ ಜಲಸ್ ಆಗುತ್ತಿದೆಯೇ? ಏಕರೂಪ ಕಾನೂನನ್ನು ಜಾರಿಗೊಳಿಸಲು ಇದು ಒಂದು ಕಾರಣವೇ’ ಎಂದು ಜಾವೇದ್ ತಮಾಷೆಯಾಗಿ ಹೇಳಿ ನಕ್ಕಿದ್ದಾರೆ. ‘ಹಿಂದೂಗಳು ಕೂಡ ಅಕ್ರಮವಾಗಿ ಬಹುಪತ್ನಿತ್ವ ನಡೆಸುತ್ತಿದ್ದಾರೆ. ಹಿಂದೂಗಳಲ್ಲಿ ಎರಡು ಮದುವೆ ಆಗೋದು ಸಾಮಾನ್ಯವಾಗಿದೆ. ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ನನ್ನ ಮಗ ಮತ್ತು ಮಗಳಿಗೆ ಸಮಾನ ಹಕ್ಕು ನೀಡಿದ್ದೇನೆ’ ಎಂದು ಅವರು ಹೇಳಿದ್ದಾರೆ.
‘ಕುಡಿದಾಗ ನಾನು ಕೆಟ್ಟ ಮನುಷ್ಯನಾಗುತ್ತೇನೆ. ಕೆಟ್ಟ ಭಾಷೆಯನ್ನು ಬಳಸುತ್ತೇನೆ. ನಾನು ಇನ್ನೊಬ್ಬ ವ್ಯಕ್ತಿಯಾಗುತ್ತಿದ್ದೆ. ಇದು ನನ್ನ ಜೊತೆ ಇರುವವರಿಗೆ ಸಮಸ್ಯೆಯನ್ನು ಉಂಟುಮಾಡಿತು. ಇದು ಹನಿ ಜೊತೆಗಿನ ಸಂಸಾರದ ಮೇಲೆ ಪರಿಣಾಮ ಬೀರಿತು. ನಾನು ಸಮಚಿತ್ತ ಮತ್ತು ಜವಾಬ್ದಾರಿಯುತ ವ್ಯಕ್ತಿಯಾಗಿದ್ದರೆ, ಕಥೆಯು ವಿಭಿನ್ನವಾಗಿರುತ್ತಿತ್ತು’ ಎಂದಿದ್ದಾರೆ ಅವರು. 42ನೇ ವಯಸ್ಸಿಗೆ ಅವರಿಗೆ ತಪ್ಪಿನ ಅರಿವಾಯಿತು. ಅವರು ಮದ್ಯಪಾನವನ್ನು ಕಡಿಮೆ ಮಾಡಿದರು. 1984ರಲ್ಲಿ ಜಾವೇದ್ ಅವರು ಶಬಾನಾ ಆಜ್ಮಿ ಅವರನ್ನು ಮದುವೆ ಆಗಿದ್ದಾರೆ.