ಬೆಂಗಳೂರು:- ಜನತಾದರ್ಶನದ ವೇಳೆ ಸ್ವೀಕಾರಗೊಂಡ ಅರ್ಜಿಗಳ ಇತ್ಯರ್ಥಕ್ಕೆ 15 ದಿನಗಳ ಗಡುವು ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎರಡು ತಿಂಗಳ ಹಿಂದೆಯೇ ಈ ಕಾರ್ಯಕ್ರಮ ನಡೆಯಬೇಕಾಗಿತ್ತು. ಎಲ್ಲ ಜಿಲ್ಲಾ ಸಚಿವರಿಗೆ ಪತ್ರ ಬರೆದಿದ್ದೆ; ಜಿಲ್ಲೆಗಳಲ್ಲಿ ಜನತಾ ಸ್ಪಂದನ ಕಾರ್ಯಕ್ರಮ ಮಾಡಿ ನನಗೆ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು. ಕೆಲವು ಜಿಲ್ಲೆಗಳಿಂದ ಮಾತ್ರ ವರದಿ ಬಂದಿದೆ. ಉಳಿದ ಜಿಲ್ಲೆಗಳಿಂದ ವರದಿ ಬಂದಿಲ್ಲ. ಸಹಿಸಲ್ಲ. ಜನತಾ ಸ್ಪಂದನ – ಅನೇಕ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲಿ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಕೆಲವು ಅರ್ಜಿಗಳು ಕೂಡಲೇ ತೀರ್ಮಾನ ಮಾಡಲು ಆಗುವುದಿಲ್ಲ. ಸಮಯ ಬೇಕಾಗುತ್ತದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಬೇಕು. ಇಲ್ಲವಾದರೆ ಬೆಳೆಯುತ್ತಲೇ ಹೋಗುತ್ತವೆ ಎಂದರು.
ಕಟ್ಟುನಿಟ್ಟಿನ ಸೂಚನೆಯನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ನೀಡುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆಸ್ಪತ್ರೆ, ಪೊಲೀಸ್ ಠಾಣೆ, ಹಾಸ್ಟೆಲ್ಗಳು ಮತ್ತಿತರ ಸ್ಥಳಗಳಿಗೆ ಭೇಟಿ ನೀಡಬೇಕು. ಜನರ ಸಮಸ್ಯೆ ಬಗೆಹರಿಸಬೇಕು. ವಿಳಂಬ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಕೂಡಲೇ ಜನರಿಗೆ ಸ್ಪಂದಿಸಲು ಸೂಚಿಸಿದರು. ಕಾನೂನು ರೀತ್ಯ ಮಾಡಲು ಸಾಧ್ಯವಾಗದಿದ್ದರೆ, ಹಿಂಬರಹ ನೀಡಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.