ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ ವಿಚಾರದ ಬಗ್ಗೆ ಮಾಜಿ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ‘ಬಿಜೆಪಿ ಪಾರ್ಟಿ(BJP Party)ಯನ್ನು ಒಬ್ಬ ರಾಮುಲು ಮಾತ್ರ ಕಟ್ಟಿಲ್ಲ. ರಾಜ್ಯದಲ್ಲಿರುವ ಕೊಟ್ಯಾಂತರ ಕಾರ್ಯಕರ್ತರ ಶ್ರಮದಿಂದ ಇವತ್ತು ಇಷ್ಟು ದೊಡ್ಡ ಪಾರ್ಟಿ ಆಗಿ ಬೆಳೆದಿದೆ. ಇಂತಹ ಸಂಧರ್ಭದಲ್ಲಿ ಯಾರನ್ನೂ ಸೇರಬೇಡ ಎನ್ನಲು ನನಗೆ ಅಧಿಕಾರ ಇಲ್ಲ. ನೂರು ಅಲ್ಲ, ಸಾವಿರ ಜನ ಬಂದ್ರೂ ನಮ್ಮ ಪಾರ್ಟಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಸರ್ವಾಧಿಕಾರ ಇದೆ. ಹೀಗಾಗಿ ನನ್ನ ಅಭ್ಯಂತರವಿಲ್ಲ ಎಂದರು.
ಎಲ್ಲರೂ ಸೇರಿದ್ರೆ ಮತ್ತೆ ಗೆಲುವು ಸಾಧ್ಯ
ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ನಾನು ಜೀವನದಲ್ಲಿ ಯಾವತ್ತೂ ದ್ವೇಷ ಹಾಗೂ ಅಸೂಹೆ ರಾಜಕಾರಣ ಮಾಡಿಲ್ಲ. ಯಾರೇ ಬಂದರೂ ಪಾರ್ಟಿಗೆ ಅನುಕೂಲ ಆಗಲಿ ಎಂದು ಬಯಸುವೆ. ಯಾರಾದರೂ ಬರುತ್ತಾರೆ ಎಂದರೆ ಬೇಡ ಎನ್ನುವುದಕ್ಕೆ ನಾನು ಯಾರು?, ಪಾರ್ಟಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ನನ್ನ ವೈಯಕ್ತಿಕ ತೀರ್ಮಾನ, ಅಭಿಪ್ರಾಯ ಇರಲ್ಲ. ಪಾರ್ಟಿ ತೀರ್ಮಾನ ಏನಿರುತ್ತದೆ, ಅದಕ್ಕೆ ನಾವು ಬದ್ದ. ಒಬ್ಬ ಶ್ರೀರಾಮುಲು ಏನು ಮಾಡುವುದಕ್ಕೆ ಆಗಲ್ಲ. ಎಲ್ಲರೂ ಸೇರಿದ್ರೆ ಮತ್ತೆ ಗೆಲುವು ಸಾಧ್ಯ. ಸಣ್ಣಪುಟ್ಟ ವ್ಯತ್ಯಾಸ ಸರಿ ಮಾಡಿ ಪಾರ್ಟಿ ಕಟ್ಟುವ ಕೆಲಸ ನಮ್ಮ ಅಧ್ಯಕ್ಷ ವಿಜಯೇಂದ್ರ ಅವರು ಮಾಡುತ್ತಾರೆ ಎಂದು ಹೇಳಿದರು.
ಇನ್ನು ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಅನುಮತಿ ವಾಪಸ್ ವಿಚಾರ ‘ಸರ್ಕಾರವನ್ನೇ ಡಿ.ಕೆ ಶಿವಕುಮಾರ್ ಕೈಗೊಂಬೆ ಮಾಡಿಕೊಂಡಿದ್ದಾರೆ. ಸಿನಿಮಾ ರೀತಿಯಲ್ಲಿ ಸರ್ಕಾರವನ್ನು ಬುಗರಿಯಂತೆ ಆಡಿಸುತ್ತಿದ್ದಾರೆ. ಗೊಂಬೆ ಆಡುತ್ತೈತೆ ಎನ್ನುವ ಹಾಗೆ ಡಿಕೆಗಾಗಿ ಹಾಡು ಬರೆಯಬೇಕು. ಸರ್ಕಾರ ಮತ್ತು ಕಾನೂನಿನ ಮಧ್ಯೆ ಭಿನ್ನಾಭಿಪ್ರಾಯ ಪ್ರಾರಂಭವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಮುಂದೆ ಸರ್ಕಾರ ತಲೆಬಾಗುತ್ತಿದೆಯಾ?, ಅಥವಾ ಸರ್ಕಾರದ ಮುಂದೆ ಇವರು ತಲೆಬಾಗುತ್ತಿದ್ದಾರಾ ಗೊತ್ತಾಗುತ್ತಿಲ್ಲ ಎಂದು ಕಿಡಿಕಾರಿದರು.