ಅಹಮದಾಬಾದ್: ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾದ (Team India) ಪ್ರಶಸ್ತಿ ಗೆಲ್ಲುವ ಬರ ಮುಂದುವರಿದಿದೆ. ಭಾನುವಾರ (ನ.19) ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ಟೀಂ ಇಂಡಿಯಾ ತಾಯ್ನಾಡಿನಲ್ಲಿ ಟ್ರೋಫಿ ಗೆಲ್ಲುವ ಅವಕಾಶ ಕೈಚೆಲ್ಲಿತು. 2003ರಲ್ಲೂ ಆಸ್ಟ್ರೇಲಿಯಾ ಎದುರು ಫೈನಲ್ನಲ್ಲಿ ಭಾರತ ಮುಗ್ಗರಿಸಿತ್ತು. 2023ರಲ್ಲೂ ಅದೃಷ್ಟ ಕೈ ಹಿಡಿಯದೇ ಹೋಯಿತು. ಆದ್ರೆ ಅಭಿಮಾನಿಗಳಿಗೆ ಮಾತ್ರ ಈ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.
ಈ ಕುರಿತು ಟೀಂ ಇಂಡಿಯಾ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill) ಭಾವುಕ ನುಡಿಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ರಾತ್ರಿಯಿಂದಲೂ ಇನ್ನೂ ವಿಶ್ವಕಪ್ ಕಳೆದುಕೊಂಡ ನೋವು ಕಡಿಮೆಯಾಗಿಲ್ಲ. ಕೆಲವೊಮ್ಮೆ ಎಷ್ಟು ಕೊಡುಗೆ ನೀಡಿದರೂ ಸಾಲೋದಿಲ್ಲ. ಹಾಗಾಗಿ ನಮ್ಮ ಅಂತಿಮ ಗುರಿ ಕಳೆದುಕೊಂಡಿದ್ದೇವೆ. ಆದ್ರೆ ಈ ಪ್ರಯಾಣದ ಪ್ರತಿಯೊಂದು ಹೆಜ್ಜೆಯು ನಮ್ಮ ತಂಡದ ಉತ್ಸಾಹ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಏಳು ಬೀಳುಗಳ ನಡುವೆಯೂ ತಳಮಟ್ಟದಿಂದಲೂ ನಮಗೆ ಅಭಿಮಾನಿಗಳಿಂದ (Team India Fans) ಸಿಕ್ಕ ಬೆಂಬಲ ದೇಶವೇ ನಮ್ಮ ಜೊತೆಗಿದೆ ಎಂಬುದನ್ನು ತೋರಿಸಿತ್ತು. ಆದ್ರೆ ಇದೇ ಅಂತ್ಯವಲ್ಲ, ನಾವು ಗೆಲ್ಲುವವರೆಗೂ ಇದು ಮುಗಿಯಲ್ಲ ಎಂದು ಹೇಳಿಕೊಂಡಿದ್ದಾರೆ.
2023ರ ವಿಶ್ವಕಪ್ ಆವೃತ್ತಿಯಲ್ಲಿ 9 ಪಂದ್ಯಗಳನ್ನಾಡಿದ ಶುಭಮನ್ ಗಿಲ್ ಒಟ್ಟು 354 ರನ್ ಗಳಿಸಿದ್ದಾರೆ. ಇದರಲ್ಲಿ 4 ಅರ್ಧಶತಕ, 41 ಬೌಂಡರಿ, 12 ಸಿಕ್ಸರ್ಗಳು ಸೇರಿವೆ. ಫೈನಲ್ ಪಂದ್ಯದಲ್ಲಿ ಸ್ಫೋಟಕ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾಕ್ಕೆ ಗಿಲ್ ಆರಂಭದಲ್ಲೇ ತಣ್ಣೀರು ಎರಚಿದರು. 4 ಓವರ್ ಕಳೆದರೂ ಕೇವಲ 6 ಎಸೆತಗಳನ್ನು ಎದುರಿಸಿದ್ದ ಗಿಲ್ 5ನೇ ಓವರ್ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ಗೆ ಸುಲಭ ಕ್ಯಾಚ್ ನೀಡಿ ಔಟಾದರು. 7 ಎಸೆತಗಳಲ್ಲಿ ಗಿಲ್ ಕೇವಲ 4 ರನ್ ಗಳಿಸಿ ಔಟಾದರು, ಇದು ಟೀಂ ಇಂಡಿಯಾ ಅಭಿಮಾನಿಗಳಿಗೂ ನಿರಾಸೆ ಮೂಡಿಸಿತ್ತು.