ಬೆಂಗಳೂರು:- ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿದ್ದು, ಅಸಂಖ್ಯಾತ ಕರಸೇವಕರ ಹೋರಾಟ, ತ್ಯಾಗ-ಬಲಿದಾನದ ಫಲ ಸಾಕಾರವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಒಂದೂವರೆ ಶತಕೋಟಿ ಭಾರತೀಯರ ಶತ ಶತಮಾನಗಳ ಕನಸು ನನಸಾಗಿದೆ. ಅಸಂಖ್ಯಾತ ಕರಸೇವಕರ ಹೋರಾಟ, ತ್ಯಾಗ-ಬಲಿದಾನದ ಫಲ ಸಾಕಾರವಾಗಿದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಪ್ರಧಾನಿಗಳಾದ ಮಾನ್ಯ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನೆರವೇರುತ್ತಿದೆ. ಈ ಎಲ್ಲಾ ಕರಸೇವಕರ ಪರಿಶ್ರಮದ ಫಲದಿಂದ ಇಂತಹ ದಿವ್ಯಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುವ ಪುಣ್ಯ ನನಗೆ ದಕ್ಕಿದೆ ಮತ್ತು ಶ್ರೀರಾಮ ದೇವರಿಗೆ ಭಕ್ತಿ ಸಮರ್ಪಣೆ ಮಾಡುವ ಸುದೈವವೂ, ಅವಕಾಶವು ನನ್ನದಾಗಿದೆ. ಎಲ್ಲ ಕರಸೇವಕರನ್ನೂ ಸ್ಮರಿಸುತ್ತಾ, ಈ ಸುಸಂದರ್ಭದಲ್ಲಿ ಸಮಸ್ತ ರಾಮಭಕ್ತರಿಗೆ ಶುಭಾಶಯಗಳನ್ನು ಕೋರುತ್ತೇನೆ. ಪ್ರತಿಯೊಬ್ಬರಿಗೂ ಆ ರಾಮದೇವರು ಸುಖ-ಶಾಂತಿ, ನೆಮ್ಮದಿ-ಸಮೃದ್ಧಿಯನ್ನು ಕರುಣಿಸಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ’ ಎಂದು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.
ಮತ್ತೊಂದು ಸಂದೇಶದಲ್ಲಿ, ‘ನನ್ನ ಪ್ರೀತಿಯ ಪುತ್ರ ಹಾಗೂ ರಾಜ್ಯ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಅವರಿಗೆ ಜನ್ಮದಿನದ ಶುಭಾಶೀರ್ವಾದಗಳು. ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ನೆರವೇರುತ್ತಿರುವ ಈ ಪುಣ್ಯಕ್ಷಣದಲ್ಲಿಯೇ ನಿಖಿಲ್, ಶ್ರೀರಾಮ ಸನ್ನಿಧಿಯಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಇದು ಅವರ ಅದೃಷ್ಟವೇ ಹೌದು. ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಸುಸಂದರ್ಭಕ್ಕೆ ಅವರೂ ಸಾಕ್ಷಿಯಾಗುತ್ತಿದ್ದಾರೆ. ಅಲ್ಲದೆ; ನಾಡಿನ ಜನರ ಸಂಕಷ್ಟಕ್ಕೆ ಮಿಡಿಯುವ, ನೊಂದವರಿಗೆ ನಿಸ್ವಾರ್ಥ ಮನಸ್ಸಿನಿಂದ ಸೇವೆ ಮಾಡುವ ಅವಕಾಶ ನಿಖಿಲ್ಗೆ ದೊರೆಯಲಿ ಎಂದು ಹೇಳಿದ್ದಾರೆ.