ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಕನ್ನಡ ಹೋರಾಟಗಾರರನ್ನು ಜೈಲಿಗೆ ಹಾಕಿರುವುದು ದುಃಖವಾಗಿದೆ. ಕನ್ನಡ ಹೋರಾಟಗಾರನ್ನು ನಾವು ಬೆಂಬಲಿಸಬೇಕು. ಸರ್ಕಾರ ಸರಿಯಾಗಿ ಕಾನೂನು ಅನುಷ್ಠಾನ ಮಾಡದಿರುವುದಕ್ಕೆ ಕನ್ನಡಪರ ಸಂಘಟನೆಗಳು ಹೋರಾಟದ ಹಾದಿ ಹಿಡಿಯಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು (Kuvempu) ಅವರ ನವೀಕೃತ ಸಭಾಂಗಣ ಹಾಗೂ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಸುಮಾರು ಎರಡು ಸಾವಿರ ಕನ್ನಡ ಹೋರಾಟಗಾರರ ಪ್ರಕರಣಗಳನ್ನು ವಾಪಸ್ ಪಡೆದಿದ್ದೆವು. ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಅನುಷ್ಠಾನ ಮಾಡದಿರುವುದರಿಂದ ಈ ಪರಿಸ್ಥಿತಿ ಬಂದಿದೆ. ಆಡಳಿತಗಾರರಿಗೆ ಸೂಕ್ಷ್ಮತೆ ಇರಬೇಕು ಎಂದಿದ್ದಾರೆ.
ಲಾಕ್ ಆಗುತ್ತಾ ರಾಜಧಾನಿ ಬೆಂಗಳೂರು – ಕನ್ನಡ ಸಂಘಟನೆಗಳು ಕೊಟ್ಟ ಎಚ್ಚರಿಕೆ ಏನು!?
ನಾವು ಕನ್ನಡದ ಅನುಷ್ಠಾನಕ್ಕಾಗಿ ವಿಧೇಯಕ ಜಾರಿಗೊಳಿಸಿದ್ದೆವು. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಕನ್ನಡನಾಡಿನಲ್ಲಿ ಕನ್ನಡದ ಅನುಷ್ಠಾನಕ್ಕಾಗಿ ಕಾನೂನು ಮಾಡುವ ಅನಿವಾರ್ಯತೆ ಬಂದಿರುವುದು ಬೇಸರದ ಸಂಗತಿ. ಈಗ ಕಾನೂನೂ ಮಾಡದಿದ್ದರೆ ನಮ್ಮ ಮಕ್ಕಳಿಗೆ ಕಷ್ಟವಾಗಲಿದೆ. ಈಗಲೂ ಕಾನೂನು ಅನುಷ್ಠಾನ ಮಾಡದಿದ್ದರೆ ಅದು ದುರ್ದೈವ. ಕನ್ನಡ ಅನುಷ್ಠಾನ ಆಗದಿದ್ದರಿಂದ ಕನ್ನಡ ಹೋರಾಟಗಾರರು ಪ್ರತಿಭಟನೆ ಮಾಡುತ್ತಿದ್ದಾರೆ. ಯಾವ ನಾಡಿನಲ್ಲಿ ಕಾನೂನು ಅನುಷ್ಠಾನ ಮಾಡುವ ವ್ಯವಸ್ಥೆ ಇರುತ್ತದೆಯೋ ಅಲ್ಲಿ ಈ ರೀತಿಯ ಪ್ರತಿಭಟನೆಗಳು ನಡೆಯುವುದಿಲ್ಲ. ಯಾವ ನಾಡಿನಲ್ಲಿ ಕಾನೂನು ಅನುಷ್ಠಾನ ಮಾಡುವುದಿಲ್ಲವೋ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದು ಅವರು ಹೇಳಿದ್ದಾರೆ.