ಪುಷ್ಪ 2 ಸಿನಿಮಾದ ಪ್ರೀಮಿಯರ್ ಶೋ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಸಂಭವಿಸಿದ ಕಾಲ್ತುಳಿತ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಮೃತ ರೇವತಿ ಕುಟುಂಬದ ಪರವಾಗಿ ತೆಲಂಗಾಣ ಸರ್ಕಾರ ಹೋರಾಟ ನಡೆಸುತ್ತಿದ್ದು ನಟ ಅಲ್ಲು ಅರ್ಜುನ್ ಹಾಗೂ ಬೌನ್ಸರ್ಗಳ ವಿಚಾರಣೆ ಮುಂದುವರಿದಿದೆ.
ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪ್ರತಿಕ್ರಿಯಿಯೆ ನೀಡಿದ್ದಾರೆ. ಅಲ್ಲು ಅರ್ಜುನ್ ವಿರುದ್ಧದ ಕೇಸ್ ಬಗ್ಗೆ ಮೌನ ಮುರಿದ ಪವನ್ ಕಲ್ಯಾಣ್ ಅವರು ಕಾನೂನು ಎಲ್ಲರಿಗೂ ಒಂದೇ. ನಾನು ತೆಲಂಗಾಣ ಪೊಲೀಸರನ್ನು ಬೈಯ್ಯುವುದಿಲ್ಲ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಬೇಕು ಎಂದಿದ್ದಾರೆ.
ಸಂಧ್ಯಾ ಥಿಯೇಟರ್ಲ್ಲಿ ಘಟನೆಯ ಮೊದಲು ಹಾಗೂ ನಂತರ ಏನಾಯಿತು ಎಂದು ನನಗೆ ಗೊತ್ತಿಲ್ಲ. ಜನರು ಫಿಲ್ಮ್ ಹೀರೋಗಳಿಗೆ ಪ್ರೀತಿ, ಬೆಂಬಲ ತೋರುತ್ತಾರೆ. ಸಿನಿಮಾ ನಟರು ಬರುತ್ತಾರೆ ಎಂದು ಗೊತ್ತಾದಾಗ, ಅಭಿಮಾನಿಗಳು ಉತ್ಸಾಹದಿಂದ ಇರುತ್ತಾರೆ. ಈ ಘಟನೆಯಲ್ಲಿ ರೇವತಿ ಸಾವಿನಿಂದ ನಾನು ಡಿಸ್ಟರ್ಬ್ ಆಗಿದ್ದೇನೆ ಎಂದು ಪವನ್ ಕಲ್ಯಾಣ್ ಹೇಳಿದರು.
ಕಾಲ್ತುಳಿತದ ಕೇಸ್ ಅನ್ನು ಸುಲಭವಾಗಿ ಬಗೆಹರಿಸಬಹುದಿತ್ತು. ಆದರೆ ಇದು ದೊಡ್ಡ ಅನಾಹುತಕ್ಕೆ ಕಾರಣವಾಯಿತು ಎಂದ ಪವನ್ ಕಲ್ಯಾಣ್ ಅವರು ನಟ ಅಲ್ಲು ಅರ್ಜುನ್ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಗಿದೆ. ಇದು ಸರಿಯಲ್ಲ. ಅಲ್ಲು ಅರ್ಜುನ್ಗೆ ಕಾಲ್ತುಳಿತದ ಬಗ್ಗೆ ಸಿಬ್ಬಂದಿ ಹೇಳಬೇಕಾಗಿತ್ತು. ಅಲ್ಲು ಅರ್ಜುನ್ ಥಿಯೇಟರ್ ಒಳಗೆ ಕುಳಿತಿದ್ದಾಗ ಅವರನ್ನು ಖಾಲಿ ಮಾಡುವಂತೆ ಸೂಚಿಸಬೇಕಿತ್ತು. ಅಲ್ಲು ಅರ್ಜುನ್ ಅವರ ಪರವಾಗಿ ಯಾರಾದರೂ ರೇವತಿ ಮನೆಗೆ ಹೋಗಿದ್ದರೆ ಚೆನ್ನಾಗಿತ್ತು ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.
ಇದೇ ವೇಳೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಬಗ್ಗೆ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದರು. ರೇವಂತ್ ರೆಡ್ಡಿ ಒಬ್ಬ ಗ್ರೇಟ್ ಲೀಡರ್. ಕೆಲವೊಮ್ಮೆ ನಿರ್ಧಾರಗಳನ್ನು ಸಂದರ್ಭಕ್ಕೆ ಅನುಸಾರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೆಳಮಟ್ಟದಿಂದ ಸಿಎಂ ಸ್ಥಾನದವರೆಗೂ ಬೆಳೆದಿದ್ದಾರೆ. ತೆಲಂಗಾಣ ಸರ್ಕಾರ ಸಿನಿಮಾ ಟಿಕೆಟ್ ದರ ಏರಿಸಿದೆ. ತೆಲಂಗಾಣ ಸರ್ಕಾರವು ವೈಎಸ್ಆರ್ ಸರ್ಕಾರದಂತೆ ವರ್ತಿಸಲ್ಲ ಎಂದು ಡಿಸಿಎಂ ಪವನ್ ಕಲ್ಯಾಣ್ ಹೇಳಿದರು.
ನಮ್ಮಣ್ಣ ಚಿರಂಜೀವಿ ಮಾಸ್ಕ್ ಹಾಕಿಕೊಂಡು ಥಿಯೇಟರ್ಗೆ ಹೋಗುತ್ತಿದ್ದರು. ನಾನು ಕೂಡ ಅದೇ ರೀತಿ ಮಾಸ್ಕ್ ಹಾಕಿಕೊಂಡೇ ಥಿಯೇಟರ್ಗೆ ಹೋಗುತ್ತಿದ್ದೆ. ಆದರೆ ಆ ಬಳಿಕ ಥಿಯೇಟರ್ಗೆ ಹೋಗುವುದನ್ನು ನಿಲ್ಲಿಸಿದ್ದೇನೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.