ಹುಬ್ಬಳ್ಳಿ: ‘ರಾಜ್ಯಪಾಲರಿಗೆ ಅನೇಕ ಹಕ್ಕು, ಜವಾಬ್ದಾರಿಗಳನ್ನು ಸಂವಿಧಾನ ನೀಡಿದೆ. ಆದರೆ ಸಣ್ಣ ಸಣ್ಣ ವಿಚಾರಕ್ಕೂ ಸರ್ಕಾರಕ್ಕೆ ಪತ್ರ ಬರೆಯುವುದು, ಅನಗತ್ಯವಾಗಿ ಕಿರುಕುಳ ನೀಡುವ ಕೆಲಸವನ್ನು ಅವರು ಮಾಡಬಾರದು’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯಪಾಲರು ಯಾವುದೇ ವಿಷಯದ ಬಗ್ಗೆ ಮಾಹಿತಿ ಕೇಳಿ ಪತ್ರ ಬರೆದರೆ ಸಂಪುಟ ಸಭೆಯಲ್ಲಿ ಕೈಗೊಳ್ಳುವ ನಿರ್ಣಯದ ಪ್ರಕಾರವೇ ಅಧಿಕಾರಿಗಳು ಉತ್ತರ ನೀಡಬೇಕು ಎಂಬ ಸಚಿವ ಸಂಪುಟದ ನಿರ್ಧಾರದ ಕುರಿತು ಗುರುವಾರ ಇಲ್ಲಿ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
‘ಕೆಲವು ಸಂದರ್ಭಗಳಲ್ಲಿ ಉತ್ತರ ನೀಡುವುದು ಅಧಿಕಾರಿಗಳಿಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯಪಾಲರು ರಾಜಕೀಯ ಉದ್ದೇಶದಿಂದ ಕೆಲಸ ಮಾಡುವುದನ್ನು ಬಿಟ್ಟು ಸಂವಿಧಾನವನ್ನು ಎತ್ತಿಹಿಡಿಯಬೇಕು’ ಎಂದರು.
‘ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದು ಸೂಕ್ತ’ ಎಂಬ ಕಾಂಗ್ರೆಸ್ ಮುಖಂಡ ಕೆ.ಬಿ. ಕೋಳಿವಾಡ ಅವರ ಹೇಳಿಕೆಗೆ, ‘ಅವರು ಈಗ ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿಲ್ಲ. ಅವರು ಸುಮ್ಮನೆ ಹೇಳಿಕೆ ಕೊಟ್ಟಿದ್ದಕ್ಕೆಲ್ಲ ಪ್ರತಿಕ್ರಿಯಿಸಲು ಆಗದು’ ಎಂದರು.
‘ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣ, ಜಮ್ಮು–ಕಾಶ್ಮೀರದಲ್ಲಿ ಕರ್ನಾಟಕದ ವಿಚಾರವನ್ನು ಎತ್ತಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ, ಆದರೆ ಅದು ಎಲ್ಲಿಯೂ ಫಲ ನೀಡುವುದಿಲ್ಲ. ಚುನಾವಣೆ ಬಂದಾಗ ಸುಳ್ಳು ಹೇಳುವುದೇ ಮೋದಿ, ಅಮಿತ್ ಶಾ ಕೆಲಸ’ ಎಂದು ಟೀಕಿಸಿದರು.
‘ಎಚ್.ಡಿ.ಕುಮಾರಸ್ವಾಮಿ ಅವರ ಬಾಮೈದನಿಗೆ ಬಿ.ಎಸ್. ಯಡಿಯೂರಪ್ಪ ಅವರು ಭೂಮಿ ಡಿನೋಟಿಫೈ ಮಾಡಿಕೊಟ್ಟ ಕುರಿತು ಎಲ್ಲ ದಾಖಲೆಗಳಿವೆ, ಲೋಕಾಯುಕ್ತ ತನಿಖೆ ಮಾಡುತ್ತಿದೆ. ಕಾಂಗ್ರೆಸ್ ಅನ್ನು ಟೀಕಿಸುವ ಬಿಜೆಪಿ ನಾಯಕರಿಗೆ ಆ ಪ್ರಕರಣದಲ್ಲಿ ತಕ್ಕ ಉತ್ತರ ಸಿಗುತ್ತದೆ’ ಎಂದರು.