ಧಾರವಾಡ:- ಯುವ ಸಮುದಾಯದಿಂದಲೇ ಭಾರತ ವಿಶ್ವ ಗುರುವಾಗಿದ್ದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಯುವಜನರು ಭವ್ಯ ಭಾರತದ ಭವಿಷ್ಯ ಮತ್ತು ಅಭಿವೃದ್ಧಿಯ ಪ್ರಮುಖ ಅಂಶವಾಗಿದ್ದು, ಯುವ ಸಮುದಾಯದಿಂದಲೇ ಭಾರತ ವಿಶ್ವ ಗುರುವಾಗಲು ಕಾರಣವಾಗಿದೆ ಎಂದರು.
ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಸ್ವಾವಲಂಬನೆಯತ್ತ ರಾಷ್ಟ್ರದ ಪ್ರಯಾಣ ಮುಂದುವರಿದಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ಹಾಗೂ ದೇಶವನ್ನು ವಿಶ್ವದ ಅತ್ಯುತ್ತಮ ಸ್ಥಾನದಲ್ಲಿ ಇರಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದರು. ಭಾರತ ವಿಶಿಷ್ಟ ಸಂಸ್ಕೃತಿಗಳಿಂದ ತುಂಬಿದ ವೈವಿಧ್ಯಮಯ ದೇಶವಾಗಿದೆ ಮತ್ತು ವಿವಿಧತೆಯಲ್ಲಿ ಏಕತೆ ಈ ರಾಷ್ಟ್ರದ ಶಕ್ತಿಯಾಗಿ ಉಳಿದಿದೆ. ಸೋಲು ಗೆಲುವು ಎಲ್ಲವೂ ಸಾಮಾನ್ಯ, ಸೋಲೇ ಗೆಲುವಿನ ಮೆಟ್ಟಿಲು ಎನ್ನುತ್ತಾರೆ. ಆದರೆ, ಕೆಲವೊಬ್ಬರ ಜೀವನದಲ್ಲಿ ಕೇವಲ ಸೋಲನ್ನು ಮಾತ್ರವೇ ಕಾಣುತ್ತಿರುತ್ತಾರೆ.
ಆಗ ಸೋತೆ ಎಂದು ಕೊರಗುವುದು, ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಬದಲು, ಗೆಲುವು ನಿಮ್ಮದಾಗಿಸಿಕೊಳ್ಳುವುದು ಹೇಗೆ, ನೀವು ಎಡವಿದ್ದೆಲ್ಲಿ ಎಂಬುದರ ಬಗ್ಗೆ ಆಲೋಚಿಸಬೇಕು. ಆತ್ಮವಿಶ್ವಾಸ, ಛಲ ನಿಮ್ಮಲ್ಲಿದ್ದರೆ ಅಸಾಧ್ಯವಾದುದ್ದನ್ನು ಕೂಡ ಸಾಧಿಸಿ ತೋರಿಸಬಹುದು ಎಂದರು. ಇದೇ ವೇಳೆ ಸಚಿವರು, ಕರ್ನಾಟಕ ಕಲಾ ಮಹಾವಿದ್ಯಾಲಯದ ಚಿತ್ತಾರ ಕಲಾ ಬಳಗ ಏರ್ಪಡಿಸಿದ್ದ ಮೂರು ದಿನಗಳ ಚಿತ್ರ ಕಲಾ ಪ್ರದರ್ಶನವನ್ನು ಉದ್ಘಾಟಿಸಿ, ಕಲಾ ಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.