ವಿಜಯಪುರ : ಸತತ 20 ಗಂಟೆಗಳ ಕಾರ್ಯಾಚರಣೆ ಬಳಿಕ ವಿಜಯಪುರದ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿರುವ ಮಗುವನ್ನು ಕೊನೆಗೆ ರಕ್ಷಿಸಲಾಗಿದೆ. ಕೊನೆಗೂ ಮಗುವಿನ ತಾಯಿಯ ಪ್ರಾರ್ಥನೆ ಫಲಿಸಿದ್ದು, ಸಾತ್ವಿಕ್ ಅನ್ನು ರಕ್ಷಣಾ ತಂಡಗಳು ಯಶಸ್ವಿಯಾಗಿ ರಕ್ಷಿಸಿವೆ. ಸ್ಥಳದಲ್ಲಿಯೇ ಆಂಬುಲೆನ್ಸ್ ಹಾಗೂ ವೈದ್ಯರು ಬೀಡು ಬಿಟ್ಟಿದ್ದರಿಂದ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಸತೀಶ ಮುಜಗೊಂಡ – ಪೂಜಾ ಮುಜಗೊಂಡ ದಂಪತಿಯ ಮಗು ಸಾತ್ವಿಕ್ ಕೊಳವೆ ಬಾವಿಗೆ ಬಿದ್ದಿತ್ತು.
ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರಿಂದ ಕೊಳವೆ ಬಾವಿಯಿಂದ ಮಗುವನ್ನು ಹೊರತೆಗೆದ ತಕ್ಷಣ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಲಾಗಿದೆ. 500 ಅಡಿ ತೆರೆದ ಕೊಳವೆ ಬಾವಿಗೆ ಮಗು ಬಿದ್ದಿದ್ದು, 20 ಅಡಿ ಮೇಲೆಯೇ ಮಗು ಸಿಲುಕಿಕೊಂಡಿದ್ದರಿಂದ ರಕ್ಷಣಾ ಕಾರ್ಯಾಚರಣೆ ಬೇಗ ಮುಗಿದಿದೆ. ತಲೆಕೆಳಗಾಗಿ ಬಿದ್ದಿದ್ದರಿಂದ ಪೈಪ್ನಲ್ಲಿ ಮಗು ಸಿಲುಕಿತ್ತು. ಎರಡು ಕೈಗಳು ದೇಹಕ್ಕೆ ಹೊತ್ತಿಕೊಂಡಿದ್ದವು. ಈ ಹಿನ್ನೆಲೆ ಮಗುವನ್ನು ಹೊರತೆಗೆಯಲು ಸ್ವಲ್ಪ ಕಷ್ಟವಾಯ್ತು.
ಒಂದೇ ಸೀರೆಯನ್ನು ಪದೇ ಪದೇ ಧರಿಸುತ್ತಿದ್ದೀರಾ!?, ಹುಷಾರ್ ಕ್ಯಾನ್ಸರ್ ಬರಬಹುದು!
ಒಂದು ಹಂತದಲ್ಲಿ ರಕ್ಷಣಾ ಕಾರ್ಯಾಚರಣೆ ಮುಗಿದಿದೆ ಎನ್ನಲಾಗಿತ್ತು. ಆದರೆ, ರಕ್ಷಣಾ ತಂಡಗಳು ತೋಡಿದ್ದ ಗುಂಡಿಯಿಂದ ಕೊಳವೆ ಬಾವಿಗೆ ಸಂಪರ್ಕಿಸುವ ರಂಧ್ರ ಚಿಕ್ಕದ್ದಾಗಿದ್ದರಿಂದ ಮಗುವನ್ನು ಹೊರತೆಗೆಯುವ ಕಾರ್ಯ ವಿಳಂಬವಾಗಿತ್ತು. ಚಿಕ್ಕ ರಂಧ್ರದಲ್ಲಿ ಮಗುವನ್ನು ಹೊರತೆಗೆಯಲು ಎರಡು ಪ್ರಯತ್ನಿಸಿ ರಕ್ಷಣಾ ತಂಡಗಳು ವಿಫಲವಾಗಿದ್ದವು. ಮಗುವಿಗೆ ಅಪಾಯ ಎಂಬ ಕಾರಣಕ್ಕೆ ಮತ್ತೊಂದು ದೊಡ್ಡ ರಂಧ್ರವನ್ನು ಕೊರೆದು, ವ್ಯಾಕ್ಯೂಮ್ ಮೂಲಕ ಸ್ವಚ್ಛ ಗೊಳಿಸಿ ಮಗುವನ್ನು ಹೊರತೆಗೆಯಲಾಯಿತು.
ರಕ್ಷಣಾ ಕಾರ್ಯಾಚರಣೆ ಹೇಗೆ?
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಸಂಜೆ ತೆರೆದ ಕೊಳವೆ ಬಾವಿಗೆ ಎರಡು ವರ್ಷದ ಮಗು ಬಿದ್ದಿತ್ತು. ಅದರ ಬೆನ್ನಲ್ಲೇ ಸಾತ್ವಿಕ್ ರಕ್ಷಣೆಗೆ ಜಿಲ್ಲಾಡಳಿತ ಕಾರ್ಯಾಚರಣೆ ಶುರು ಮಾಡಿತ್ತು. ಸಂಜೆ 6 ಗಂಟೆಯಿಂದ ಅಗ್ನಿಶಾಮಕದಳ ಹಾಗೂ ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳು ಕಾರ್ಯಾಚರಣೆ ಶುರು ಮಾಡಿದ್ದವು. ಕೊಳವೆ ಬಾವಿ ಪಕ್ಷ 20 ಅಡಿಗಳಷ್ಟು ಆಳದ ಗುಂಡಿ ತೆಗೆಯಲಾಗಿದ್ದು, ಅಲ್ಲಿಂದ ಕೊಳವೆ ಬಾವಿಗೆ ಸುರಂಗ ನಿರ್ಮಿಸಿ ಮಗುವನ್ನು ಹೊರತೆಗೆಯಲಾಗಿದೆ.
ರಕ್ಷಣಾ ಕಾರ್ಯಾಚರಣಗೆ ಕಲ್ಲು ಬಂಡೆಗಳು ಅಡ್ಡಿಯಾಗಿದ್ದವು. ಅವುಗಳನ್ನು ಕೊರೆದು ಮಗುವನ್ನು ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ದಳ ಹಾಗೂ ಬೆಳಗಾವಿ, ಕಲಬುರಗಿಯಿಂದ ಆಗಮಿಸಿದ್ದ ಎರಡು ಎಸ್ಡಿಆರ್ಎಫ್ ತಂಡಗಳು, ಕೊಳವೆ ಬಾವಿ ಕೊರೆಯುವ ನುರಿತರ ತಂಡಗಳು ನಿರಂತರ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆಗೆ ಎರಡು ಹಿಟಾಚಿ, ಬ್ರೇಕರ್ಗಳ ಬಳಕೆ ಮಾಡಲಾಗಿತ್ತು. ರಕ್ಷಣಾ ಕಾರ್ಯಾಚರಣೆ ನೋಡಲು ಜನ ಕಿಕ್ಕಿರಿದು ಸೇರಿದ್ದರು.
ಘಟನೆ ಏನು?
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಬುಧವಾರ ಸಂಜೆ ತೆರೆದ ಕೊಳವೆ ಬಾವಿಗೆ ಎರಡು ವರ್ಷದ ಮಗು ಬಿದ್ದಿತ್ತು. ಮಂಗಳವಾರ ರಾತ್ರಿಯಷ್ಟೇ ಬೋರ್ವೆಲ್ ಅನ್ನು ಕೊರೆಸಲಾಗಿತ್ತು, ಸಂಜೆ ಮಗು ಆಟ ಆಡುತ್ತಾ ಕೊಳವೆ ಬಾವಿಗೆ ಬಿದ್ದಿದೆ. ಮಗು ಕಾಣದಿದ್ದಾಗ ತಾಯಿ ಮನೆ ಸುತ್ತ ಹುಡುಕಿದ್ದು, ಕೊನೆಗೂ ಟಾರ್ಚ್ ಹಿಡಿದು ನೋಡಿದಾಗ ಬೋರ್ವೆಲ್ನಲ್ಲಿ ಮಗು ಬಿದ್ದಿರುವುದು ಕಂಡುಬಂದಿದೆ.