ಹಾಸನ: ರಾಮ ಮಂದಿರ ಎಂಬುದು ಭಾರತದ ಕೋಟ್ಯಂತರ ಮಂದಿಯ ಭಾವನಾತ್ಮಕ ಸಂಬಂಧ. ಅದರಲ್ಲಿ ರಾಜಕಾರಣ ಮಾಡುತ್ತೇನೆ ಎನ್ನುವುದು ಮೂರ್ಖತನವಾಗುತ್ತದೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ‘ರಾಮಮಂದಿರ ನಿರ್ಮಾಣವಾಗುತ್ತಿದೆ. ಪ್ರಧಾನ ಮಂತ್ರಿ ಆಹ್ವಾನ ಮಾಡಿದ್ದಾರೆ.
ಖಂಡಿತವಾಗಿಯೂ ನಾನಂತೂ ಹೋಗುತ್ತೇನೆ. ಕಾಂಗ್ರೆಸ್ ನಿರ್ಣಯ ಅವರ ಪಕ್ಷಕ್ಕೆ ಬಿಟ್ಟದ್ದು. ಅವರ ನಿರ್ಣಯ ಯಾವ ರೀತಿ ಇಂಪ್ಯಾಕ್ಟ್ ಆಗುತ್ತದೆ ಅಂತ ೨೦೨೪ ರ ಚುನಾವಣೆಯಲ್ಲಿ ನೋಡಬೇಕು’ ಎಂದು ಹೇಳಿದರು.
ಮಂತ್ರಾಕ್ಷತೆ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿ, ‘ಅದು ಅವರವರ ಅನಿಸಿಕೆ. ರಾಮ ಮಂದಿರ ನಿರ್ಮಾಣಕ್ಕೆ ನಾನು ಸಹಕಾರ ಕೊಡ್ತೀನಿ ಅಂತ ಅವರೇ ಹೇಳಿದ್ದರು. ಕೇಂದ್ರದ ಕಾಂಗ್ರೆಸ್ ಬೇರೆ ರೀತಿ ಹೇಳುತ್ತಿದೆ, ರಾಜ್ಯ ಕಾಂಗ್ರೆಸ್ ಬೇರೆ ರೀತಿ ಹೇಳುತ್ತಿದೆ. ಎರಡು ತಪ್ಪು ಮಾಹಿತಿ ನೀಡುತ್ತಿವೆ’ಎಂದು ಬೇಸರ ವ್ಯಕ್ತಪಡಿಸಿದರು.
‘ಐಎನ್ಡಿಐಎ ಒಕ್ಕೂಟದಲ್ಲಿ ಒಗ್ಗಟ್ಟಿಲ್ಲ ಎಂಬುದು ಅನೇಕ ವಿಷಯಗಳಲ್ಲಿ ಎದ್ದು ಕಾಣುತ್ತಿದೆ. ನಿತಿಶ್ಕುಮಾರ್ ಸಭೆಯಿಂದ ಹೊರಗೆ ಹೋಗ್ತಾರೆ. ಖರ್ಗೆ ಅವರನ್ನು ಪಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡ್ತೀವಿ ಅಂದಾಗ ಸ್ವಪಕ್ಷದಲ್ಲೇ ಆ ಜನಾಂಗಕ್ಕೆ ಬೆಂಬಲ ಕೊಡುತ್ತಿಲ್ಲ. ಇವೆಲ್ಲ ಗಮನಿಸಿದರೆ ಒಕ್ಕೂಟದಲ್ಲಿ ಹೊಂದಾಣಿಕೆ ಇಲ್ಲಾ ಎಂಬುದು ಎದ್ದು ಕಾಣುತ್ತಿದೆ’ ಎಂದು ವ್ಯಂಗ್ಯವಾಡಿದರು. ಎನ್ಡಿಎ ಅಲಯನ್ಸ್ ಪಾರ್ಟಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬುದು ಎದ್ದು ಕಾಣುತ್ತಿದೆ ಎಂದು ಭವಿಷ್ಯ ನುಡಿದರು.