ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣದಿಂದ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ ಎಂಬ ಆರೋಪ ಸುಳ್ಳು ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ನಡೆದ ಅಡ್ಜಸ್ಟ್ಮೆಂಟ್ ರಾಜಕೀಯ ಸೋಲಿಗೆ ಕಾರಣ ಎಂದು ಸತ್ಯಶೋಧನಾ ಸಮಿತಿ ಮುಂದೆ ಹಿರಿಯ ನಾಯಕರು ದೂರಿದ್ದರು. ಆದರೆ ಇದನ್ನು ಡಿಕೆಶಿ ನಿರಾಕರಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸತ್ಯಶೋಧನಾ ಸಮಿತಿಯ ಮುಂದೆ ಗೆದ್ದವರು, ಸೋತವರು, ಕಾರ್ಯಕರ್ತರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಕೆಲವರು ವರದಿ ಕೊಟ್ಟಿದ್ದಾರೆ ಮತ್ತೆ ಕೆಲವರು ಅಭಿಪ್ರಾಯ ಹೇಳಿದ್ದಾರೆ. ನಾವು ಸಹ ಮಾತಾಡಿದ್ದೇವೆ. ಸಿಎಂ ಮಧ್ಯಾಹ್ಮ ಬರುವವರಿದ್ದರು. ಸಭೆಯಿದೆ, ಸಭೆ ಮುಗಿದ ಮೇಲೆ ಬರ್ತಾರೆ ಎಂದರು.
ಸಿಎಂ ಸಿದ್ದರಾಮಯ್ಯ ಅವರು ಕೂಡಾ ಕೆಲವೊಂದು ಸಲಹೆ ಸೂಚನೆಗಳನ್ನು ಹಾಗೂ ವಿಚಾರಗಳನ್ನು ಸತ್ಯಶೋಧನಾ ಸಮಿತಿಯ ಮುಂದೆ ತಿಳಿಸುತ್ತಾರೆ. ಆದರೆ ನಾವು ಹೊಂದಾಣಿಕೆ ರಾಜಕಾರಣ ಮಾಡಿದ್ದೇವೆ ಎಂಬುವುದು ಸುಳ್ಳು. ಎಲ್ಲಾ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಅಂಡರ್ ಕರೆಂಟ್ ಗೊತ್ತಾಗಿಲ್ಲ, ಎಲ್ಲೂ ಹೊಂದಾಣಿಕೆ ಆಗಿಲ್ಲ ಎಂದರು.
ಇನ್ನು ಕುಟುಂಬದ ಸದಸ್ಯರಿಗೆ ಟಿಕೆಟ್ ಕೊಟ್ಟಿದ್ದು ಹಿನ್ನಡೆಗೆ ಒಂದು ಅಂಶ ಎಂಬ ಆರೋಪಕ್ಕೆ, ನಾವೇ ಕೆಲವರನ್ನು ಒತ್ತಾಯ ಮಾಡಿ ಕುಟುಂಬದವರನ್ನ ನಿಲ್ಲಿಸಿದ್ದೇವೆ. ಮುಂದೆ ಅವರು ಪಕ್ಷಕ್ಕೆ ಅಸೆಟ್ ಆಗ್ತಾರೆ ಎಂದು ಹೇಳಿದರು.