ಬೆಂಗಳೂರು:- ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದೆಹಲಿ ನಿವಾಸಗಳ ಮೇಲೆ ಐಟಿ ದಾಳಿ ಮಾಡಿದ್ದ ಪ್ರಕರಣದಲ್ಲಿ ವಿದೇಶ ಪ್ರಯಾಣಕ್ಕಿರುವ ನಿರ್ಬಂಧಕ್ಕೆ ಈಗ ವಿನಾಯಿತಿ ದೊರೆತಿದೆ.
ಐಟಿ ಪ್ರಕರಣದಲ್ಲಿ ಆರೋಪಿಯಾಗಿರುವ ಶಿವಕುಮಾರ್, ವಿಶ್ವಸಂಸ್ಥೆಯ ಪರಿಸರ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಬೇಕಿದೆ. ಹೀಗಾಗಿ ನವೆಂಬರ್ 29ರಿಂದ ಡಿಸೆಂಬರ್ 3ರ ವರೆಗೆ ತೆರಳಲು ಅನುಮತಿ ನೀಡಬೇಕೆಂದು ಕೋರಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಧೀಶೆ ಜೆ. ಪ್ರೀತ್ ಅನುಮತಿಸಿ ಆದೇಶ ನೀಡಿದ್ದಾರೆ.
ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆ ನಡೆಸಲು ಸರ್ಕಾರದ ಅನುಮತಿಗೆ ಹೈಕೋರ್ಟ್ ತಡೆ ನೀಡಿತ್ತು. ಈ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಸಿಬಿಐನಿಂದ ಹೈಕೋರ್ಟ್ಗೆ ಇತ್ತೀಚೆಗಷ್ಟೇ ಅರ್ಜಿ ಸಲ್ಲಿಕೆಯಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ವಿದೇಶ ಪ್ರಯಾಣಕ್ಕೆ ಅನುಮತಿ ದೊರೆತಿದ್ದರಿಂದ ಡಿಕೆ ಶಿವಕುಮಾರ್ ನಿರಾಳರಾಗುವಂತಾಗಿದೆ.