ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದ್ದರೂ ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕಾಲಾವಕಾಶ ಇದೆ. ಹೊಸದಾಗಿ ಹೆಸರು ಸೇರ್ಪಡೆ ಮಾಡುವವರು ಅಥವಾ ಹೆಸರು ಬಿಟ್ಟು ಹೋಗಿರುವವರು ಒಮ್ಮೆ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಮತ್ತೆ ಅರ್ಜಿ ಸಲ್ಲಿಸಬಹುದು. ಅಂತಹ ಅರ್ಜಿಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು.
ಮಾ.31ರೊಳಗೆ 18 ವರ್ಷ ತುಂಬುವ ಯುವ ಮತದಾರರಿಗೂ ಮುಂಗಡವಾಗಿಯೇ ಹೆಸರು ಸೇರ್ಪಡೆ ಮಾಡಬಹುದಾಗಿದೆ. ಅಂತಹ ಯುವಜನತೆ ಇದೀಗ ಅರ್ಜಿ ಸಲ್ಲಿಸಿದರೆ ಅವುಗಳನ್ನು ಏ.1ರ ನಂತರ ಪರಿಶೀಲಿಸಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಈಗಾಗಲೇ ಅಂತಹ 50 ಸಾವಿರ ಮಂದಿ ಮುಂಗಡ ಅರ್ಜಿ ಸಲ್ಲಿಸಿದ್ದು, ಅವರ ಹೆಸರು ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ವೋಟರ್ ಐಡಿ ಕಾರ್ಡ್ ಯಾರಿಗೆ ಕೊಡ್ತಾರೆ? ಅರ್ಹತೆ ಏನು?
ವೋಟರ್ ಐಡಿ ಕಾರ್ಡ್ ಪಡೆಯಬೇಕು ಅಂದ್ರೆ, ನಿಮಗೆ 18 ವರ್ಷ ತುಂಬಿರಬೇಕು. ಭಾರತದ ಪ್ರಜೆ ಆಗಿರಬೇಕು. ಇನ್ನು ನೀವು ಕರ್ನಾಟಕದಲ್ಲಿ ಮತ ಚಲಾಯಿಸಬೇಕಾದ ಕಾರಣ, ಕರ್ನಾಟಕದ ನಿವಾಸಿ ಅನ್ನೋದಕ್ಕೆ ಒಂದು ಖಾಯಂ ಅಡ್ರೆಸ್ ಪ್ರೂಫ್ ಇರಬೇಕು. ಅದರಲ್ಲೂ ನೀವು ಯಾವ ಕ್ಷೇತ್ರದಲ್ಲಿ ಮತ ಹಾಕಬೇಕೋ ಆ ಕ್ಷೇತ್ರದ ಒಳಗೆ ನೀವು ವಾಸ ಮಾಡ್ತಿದ್ದೀರಿ ಅನ್ನೋದಕ್ಕೆ ಅಡ್ರೆಸ್ ಪ್ರೂಫ್ ಇರಬೇಕು. ಅರ್ಜಿ ಜೊತೆಗೆ ನಿಮ್ಮ ಇತ್ತೀಚಿನ ಒಂದು ಪಾಸ್ಪೋರ್ಟ್ ಸೈಜ್ ಫೋಟೋ ಕೊಡಬೇಕು. ನಿಮ್ಮ ವಯಸ್ಸು 18 ವರ್ಷ ದಾಟಿದೆ ಅಂತಾ ಕನ್ಫರ್ಮ್ ಮಾಡಿಕೊಳ್ಳೋದಕ್ಕೂ ನೀವು ಪ್ರೂಫ್ ಕೊಡಬೇಕಾಗುತ್ತೆ.
ವಿಳಾಸ, ವಯಸ್ಸಿನ ದಾಖಲೆ ಏನು ಕೊಡಬಹುದು?
ನಿಮ್ಮ ವಯಸ್ಸು 18 ವರ್ಷ ದಾಟಿದೆ ಅಂತಾ ಸಾಬೀತು ಮಾಡೋಕೆ ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ ಕೊಡಬಹುದು, ಜನನ ಪ್ರಮಾಣ ಪತ್ರ ಕೊಡಬಹುದು, ಪಾಸ್ ಪೋರ್ಟ್, ಪಾನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಯಾವುದನ್ನಾದ್ರೂ ಕೊಡಬಹುದು. ಅದರಲ್ಲಿ ನಿಮ್ಮ ಡೇಟ್ ಆಫ್ ಬರ್ತ್ ಇರುತ್ತೆ. ಅದರ ಆಧಾರದ ಮೇಲೆ ನಿಮಗೆ ವೋಟರ್ ಐಡಿ ಕಾರ್ಡ್ ಕೊಡ್ತಾರೆ. ಇನ್ನು ಅಡ್ರೆಸ್ ಪ್ರೂಫ್ ಏನು ಕೊಡಬಹುದು ಅಂತಾ ನೋಡೋದಾದ್ರೆ, ನೀವು ನಿಮ್ಮ ಹೆಸರು ಇರುವ ರೇಷನ್ ಕಾರ್ಡ್ ಕೊಡಬಹುದು. ಪಾಸ್ಪೋರ್ಟ್ ಕೊಡಬಹುದು, ಡ್ರೈವಿಂಗ್ ಲೈಸೆನ್ಸ್, ಟೆಲಿಫೋನ್ ಬಿಲ್ ಅಥವಾ ವಿದ್ಯುತ್ ಬಿಲ್ ಕೂಡಾ ಕೊಡಬಹುದು. ಆದ್ರೆ ಬಿಲ್ಗಳು ನಿಮ್ಮ ಹೆಸರಲ್ಲಿ ಇರಬೇಕು.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ?
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು ಅಂದ್ರೆ WWW.NVSP.IN ವೆಬ್ಸೈಟ್ಗೆ ಭೇಟಿ ನೀಡಬೇಕು. ಅಲ್ಲಿ ನೀವು ರಿಜಿಸ್ಟ್ರೇಷನ್ ಆಫ್ ನ್ಯೂ ವೋಟರ್ ಎಂಬ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಸೈನ್ ಅಪ್ ಆಗಬೇಕು. ಈ ವೇಳೆ ನಿಮಗೆ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಸಿಗುತ್ತೆ. ಯೂಸರ್ ಐಡಿ ಹಾಗೂ ಪಾಸ್ವರ್ಡ್ ಸಿಕ್ಕ ಬಳಿಕ ನೀವು ಮತ್ತೆ ಲಾಗ್ ಇನ್ ಆಗಬೇಕು. ನಂತರ ಈ ವೆಬ್ಸೈಟ್ನಲ್ಲಿ ಫಾರಂ 6 ಅನ್ನೋ ಆಪ್ಶನ್ ಇರುತ್ತೆ. ಆ ಫಾರಂ ಡೌನ್ ಲೋಡ್ ಮಾಡ್ಕೋಬೇಕು.
ಒಂದು ವೇಳೆ ನೀವು ಭಾರತದ ಹೊರಗೆ ಇರುವ ಎನ್ಆರ್ಐ ವೋಟರ್ ಆಗಿದ್ದರೆ, ಫಾರಂ 6A ಅನ್ನೋ ಅರ್ಜಿಯನ್ನ ಡೌನ್ ಲೋಡ್ ಮಾಡ್ಕೋಬೇಕು. ಈ ಅರ್ಜಿಯಲ್ಲಿ ನೀವು ನಿಮ್ಮ ಹೆಸರು, ವಯಸ್ಸು, ಅಡ್ರೆಸ್ ಇತ್ಯಾದಿ ವಿವರಗಳನ್ನ ಭರ್ತಿ ಮಾಡಬೇಕು. ನಿಮ್ಮ ಬಳಿ ಇರುವ ಅಡ್ರೆಸ್ ಪ್ರೂಫ್ ಹಾಗೂ ಏಜ್ ಪ್ರೂಫ್ನಲ್ಲಿ ಇರೋ ವಿವರಗಳನ್ನೇ ಈ ಅರ್ಜಿಯಲ್ಲೂ ಬರೆಯಬೇಕು. ಅರ್ಜಿ ಭರ್ತಿ ಮಾಡಿದ ಮೇಲೆ ಅದನ್ನು ಫೋಟೋ ತೆಗೆದು ನಿಮ್ಮ ಏಜ್ ಪ್ರೂಫ್, ಅಡ್ರೆಸ್ ಪ್ರೂಫ್ ಹಾಗೂ ಪಾಸ್ಪೋರ್ಟ್ ಸೈಜಿನ ಫೋಟೋ ಎಲ್ಲವನ್ನೂ ಅಪ್ಲೋಡ್ ಮಾಡಬೇಕು.
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ?
ನಿಮ್ಮ ಏರಿಯಾಗೆ ಹತ್ತಿರದಲ್ಲಿ ಇರುವ ಕರ್ನಾಟಕ ರಾಜ್ಯ ಚುನಾವಣಾ ಕಚೇರಿಗೆ ಹೋದ್ರೆ, ನಿಮಗೆ ಫಾರ್ಮ್ 6 ಸಿಗುತ್ತೆ. ಅದನ್ನು ತಗೊಂಡು ಎಲ್ಲಾ ವಿವರ ಭರ್ತಿ ಮಾಡಬೇಕು. ನಿಮ್ಮ ಫೋಟೋ ಅಂಟಿಸಬೇಕು. ನಂತರ ಚುನಾವಣಾ ಆಯೋಗದ ಕಚೇರಿಗೆ ಮತ್ತೆ ಹೋಗಿ ಏಜ್ ಪ್ರೂಫ್, ಅಡ್ರೆಸ್ ಪ್ರೂಫ್ ಸಮೇತ ನಿಮ್ಮ ಅರ್ಜಿ ಸಲ್ಲಿಕೆ ಮಾಡಬೇಕು.
ನೀವು ಆನ್ಲೈನ್ನಲ್ಲೇ ಆಗಲಿ, ಆಫ್ಲೈನ್ನಲ್ಲೇ ಆಗಲಿ.. ಯಾವುದೇ ಮಾದರಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ರೂ ಕೂಡಾ ನಿಮ್ಮ ವಿವರಗಳನ್ನ ಅಧಿಕಾರಿಗಳು ಪರಿಶೀಲನೆ ಮಾಡ್ತಾರೆ. ನೀವು ಕೊಟ್ಟಿರುವ ಅಡ್ರೆಸ್ ಬಳಿ ಬಂದು ಚೆಕ್ ಮಾಡ್ತಾರೆ. ಪರಿಶೀಲನೆ ಮುಗಿದ ಮೇಲೆ ನಿಮ್ಮ ವೋಟರ್ ಐಡಿ ಕಾರ್ಡ್ ಸಿದ್ದವಾಗುತ್ತೆ. ನಿಮ್ಮ ಮನೆ ಅಡ್ರೆಸ್ಗೆ ವೋಟರ್ ಐಡಿ ಕಾರ್ಡ್ ಬರುತ್ತೆ.
ಆಪ್ ಮೂಲಕವೂ ವೋಟರ್ ಐಡಿಗೆ ಅರ್ಜಿ ಹಾಕಬಹುದು!
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಯಿಸಬೇಕೆಂದರೆ ಹಾಗೂ ವೋಟರ್ ಐಡಿ ಕಾರ್ಡ್ ಬೇಕೆಂದರೆ ನೀವು ಮೊಬೈಲ್ ಆಪ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು Voter Helpline App ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೆಸರನ್ನು ಮನೆಯಲ್ಲೇ ಕುಳಿತು ನೋಂದಾಯಿಸಬಹುದು.
ಈ ಅಂಶಗಳನ್ನು ಎಂದಿಗೂ ಮರೆಯದಿರಿ..!
ವೋಟರ್ ಐಡಿ ಕಾರ್ಡ್ಗೆ ನೀವು ಒಂದು ಫಾರಂನಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬಹುದು. ಕೆಲವೊಮ್ಮೆ ಆನ್ಲೈನ್ನಲ್ಲಿ ಅರ್ಜಿ ಹಾಕುವಾಗ ಸಮಸ್ಯೆ ಆದ್ರೆ ನೇರವಾಗಿ ಚುನಾವಣಾ ಕಚೇರಿಗೆ ಹೋಗಿ ಅರ್ಜಿ ಕೊಡೋದು ಉತ್ತಮ. ಇನ್ನು ನಿಮ್ಮ ವಿಳಾಸ ಬದಲಾವಣೆ ಮಾಡಬೇಕು ಅಂದ್ರೆ, ಬೇರೆ ಮಾಹಿತಿ ಏನಾದ್ರೂ ಸೇರಿಸಬೇಕು ಅಂತಿದ್ರೆ ಅಥವಾ ನಿಮ್ಮ ಹೆಸರನ್ನ ವೋಟರ್ ಲಿಸ್ಟ್ನಿಂದ ತೆಗೆಯಬೇಕು ಅಂತಾ ಇದ್ರೂ ಕೂಡಾ ಅದಕ್ಕೆ ಬೇಕಾದ ಎಲ್ಲಾ ಮಾಹಿತಿಗಳೂ WWW.NVSP.IN ನಲ್ಲಿ ಸಿಗುತ್ತೆ.