ಹೆಚ್ಚಿನ ಜನರ ಮನೆಗಳಲ್ಲಿ ಕೆಂಪು ಮತ್ತು ಕಪ್ಪು ಇರುವೆಗಳು ಗೋಚರಿಸುತ್ತವೆ. ಶಕುನ ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವೆಗಳು ಕಾಣಿಸಿಕೊಳ್ಳುವ ಬಗ್ಗೆ ಅನೇಕ ಮಾಹಿತಿಯನ್ನು ನೀಡಲಾಗಿದೆ. ಮನೆಯ ಯಾವುದೋ ಮೂಲೆಯಿಂದ ಇರುವೆಗಳು ಹೊರಬರುತ್ತಿದ್ದರೆ, ಅದು ನಿಮ್ಮ ಜೀವನದಲ್ಲಿ ಏನಾದರೂ ನಡೆಯುತ್ತಿದೆ ಎಂಬುದರ ಸಂಕೇತವಾಗಿದೆ. ಆದರೆ, ನಾವೆಲ್ಲರೂ ಮನೆಯಲ್ಲಿ ಇರುವೆಗಳನ್ನು ನೋಡಿದಾಕ್ಷಣ ಅದನ್ನು ನಿರ್ಲಕ್ಷಿಸುತ್ತೇವೆ.
ನಮ್ಮ ಹಿಂದೂ ಧರ್ಮಗ್ರಂಥಗಳ ಪ್ರಕಾರ, ಪ್ರತಿ ಜೀವಿಗೂ ಒಂದಲ್ಲ ಒಂದು ಸೂಚನೆ ಇದ್ದೇ ಇರುತ್ತದೆ. ಅದರಲ್ಲೂ ಮನೆಯಲ್ಲಿ ಕೆಂಪು ಇರುವೆ ಮತ್ತು ಕಪ್ಪು ಇರುವೆಗಳ ಹಾಜರಾತಿಯನ್ನು ಶುಭ ಮತ್ತು ಅಶುಭ ಚಿಹ್ನೆಗಳಾಗಿ ನೋಡಲಾಗುತ್ತದೆ.
ಪ್ರತಿ ಜೀವಿಗೂ ಒಂದೊಂದು ಮಹತ್ವ ಇದೆ. ಅವುಗಳಿಗೆ ಸಂಬಂಧಿಸಿದ ಹಲವು ಸೂಚನೆಗಳು ಮತ್ತು ಸಂಕೇತಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಈ ಸೂಚನೆಗಳು ಕೆಲವೊಮ್ಮೆ ಒಳ್ಳೆಯದನ್ನು ಸೂಚಿಸಿದರೆ, ಇನ್ನು ಕೆಲವೊಮ್ಮೆ ಕೆಟ್ಟದ್ದನ್ನು ಸೂಚಿಸುತ್ತವೆ. ಹಾಗಂತ ಯಾವುದನ್ನೂ ನಿರ್ಲಕ್ಷಿಸುವುದಕ್ಕೂ ಮೊದಲು ಸ್ವಲ್ಪ ಎಚ್ಚರವಹಿಸುವುದು ಸೂಕ್ತ.
ಮನೆಯಲ್ಲಿ ಕೆಂಪು ಮತ್ತು ಕಪ್ಪು ಇರುವೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ ಅದರ ಅರ್ಥವೇನು? ಅದರಿಂದ ನಮ್ಮ ಜೀವನದ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ಭೋಪಾಲ್ನ ಜ್ಯೋತಿಷಿ ಮತ್ತು ವಾಸ್ತು ಸಲಹೆಗಾರ ಪಂಡಿತ್ ಹಿತೇಂದ್ರ ಕುಮಾರ್ ಶರ್ಮಾ ಮಾಹಿತಿ ನೀಡಿದ್ದಾರೆ. ಯಾವುದೇ ಜೀವಿ ನಿಮ್ಮ ಮನೆಯಲ್ಲಿ ಕಾಣಿಸಿಕೊಳ್ಳಬೇಕಾದರೆ ಮತ್ತು ಇರಬೇಕಾದರೆ ಅದು ಕಾಕತಾಳೀಯ ಅಲ್ಲ. ಅದಕ್ಕೆ ಒಂದು ಅರ್ಥವಿರುತ್ತೆ ಮತ್ತು ಅದಕ್ಕೆ ಆದಂತಹ ಮಹತ್ವಗಳು ಇರುತ್ತದೆ ಎಂದು ತಿಳಿಸಿದ್ದಾರೆ.
ಮನೆಯಲ್ಲಿ ಯಾವುದಾದರೂ ಸಿಹಿ ಇಟ್ಟಿದ್ರೆ, ಅಥವಾ ತಿನ್ನುವ ಪದಾರ್ಥಗಳನ್ನ ಇಟ್ಟಿದ್ರೆ ಇರುವೆ ಬರುವುದು ಸಹಜ. ಸಿಹಿ ಅಂದರೆ ಇರುವೆಗಳು ಮುಂಚಿತಾಗಿಯೇ ಹಾಜರಾಗಿರುತ್ತವೆ. ಹೀಗೆ ಕೆಂಪು ಇರುವೆಗಳು ಮನೆಯಲ್ಲಿ ಕಾಣಿಸಿಕೊಂಡರೆ ಆರ್ಥಿಕ ನಷ್ಟ, ಕುಟುಂಬದಲ್ಲಿ ಕಲಹ, ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಇರುವೆಗಳು ಕಾಣಿಸಿಕೊಳ್ಳುವುದು ಕೂಡ ನಮ್ಮ ಜೀವನದಲ್ಲಿ ನಡೆಯುವ ಕೆಲವು ವಿಶೇಷ ಘಟನೆಗಳ ಸೂಚನೆ ನೀಡುತ್ತದೆ. ಕೆಲವೊಮ್ಮೆ ಈ ಸೂಚನೆಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಸೂಚಿಸಿದರೆ, ಇನ್ನು ಕೆಲವೊಮ್ಮೆ ಮುಂದೆ ಬರಲಿರುವ ಕಷ್ಟಗಳ ಸಂಕೇತವಾಗಿರುತ್ತದೆ. ಕೆಂಪು ಮತ್ತು ಕಪ್ಪು ಇರುವೆಗಳು ಮನೆಯಲ್ಲಿ ಕಾಣಿಸಿಕೊಂಡರೆ ಅದು ವ್ಯಕ್ತಿಯ ಭವಿಷ್ಯದ ಬಗ್ಗೆ ಸೂಚನೆ ನೀಡುತ್ತದೆ. ಜೊತೆಗೆ ಮನಷ್ಯನ ಸಂಪತ್ತು, ಸಮೃದ್ಧಿ, ಬೆಳವಣಿಗೆ ಬಗ್ಗೆಯೂ ಸೂಚನೆ ಕೊಡುತ್ತದೆ ಎನ್ನಲಾಗಿದೆ.
ಮನೆಯಲ್ಲಿ ಕೆಂಪು ಇರುವೆಗಳು ಕಾಣಿಸಿಕೊಂಡರೆ ಅದನ್ನು ಒಳ್ಳೆಯ ಸೂಚನೆ ಎಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷಿಗಳ ಪ್ರಕಾರ, ಕೆಂಪು ಇರುವೆಗಳು ದೊಡ್ಡ ನಷ್ಟ ಅಥವಾ ಕೆಲವು ಅಹಿತಕರ ಘಟನೆಗಳ ಸಂಕೇತವಾಗಿರುತ್ತದೆ. ಒಂದು ವೇಳೆ ಈ ಇರುವೆಗಳು ಮನೆಯೊಳಗೆ ಬಂದು ಎಲ್ಲಿಂದಲೋ ಹೊರಟುಹೋದರೆ ಅದು ಜಗಳ, ಮಾನಸಿಕ ಒತ್ತಡ ಅಥವಾ ಹಣದ ನಷ್ಟವನ್ನು ಸೂಚಿಸುತ್ತದೆ
ಮನೆಯಲ್ಲಿ ಇರುವೆಗಳು ಕಾಣಿಸಿಕೊಳ್ಳುವುದರಿಂದ ವ್ಯಕ್ತಿಯ ಜೀವನದಲ್ಲಿ ಕೆಲವು ವಿಶೇಷ ಸುಳಿವುಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಕೆಂಪು ಇರುವೆ ಅಶುಭ ಎನ್ನುವುದು ಎಷ್ಟು ನಿಜವೋ ಅದೇ ರೀತಿ, ಒಂದು ಕೆಂಪು ಇರುವೆ ಬಾಯಲ್ಲಿ ಮೊಟ್ಟೆ ಇಟ್ಟುಕೊಂಡು ಹೊರಗೆ ಹೋದರೆ ಅದನ್ನು ಶುಭ ಫಲಿತಾಂಶ ಎಂದು ಪರಿಗಣಿಸಲಾಗುತ್ತದೆ ಎಂದು ಜ್ಯೋತಿಷಿ ತಿಳಿಸಿದ್ದಾರೆ.
ಮನೆಯ ಸುತ್ತಮುತ್ತ ಕಪ್ಪು ಇರುವೆಗಳು ಗುಂಪು ಗುಂಪಾಗಿ ಓಡಾಡುತ್ತಿದ್ದರೆ, ಅದು ಸಂತೋಷ, ಸಮೃದ್ಧಿ ಮತ್ತು ಹೆಚ್ಚಿದ ಸಂಪತ್ತಿನ ಸಂಕೇತವಾಗಿದೆ. ಮನೆಯಲ್ಲಿ ಎಲ್ಲೆಲ್ಲಿ ಕಪ್ಪು ಇರುವೆಗಳು ಕಾಣಿಸಿಕೊಳ್ಳುತ್ತವೆಯೋ ಅಲ್ಲಿ ಸಂತೋಷ ಮತ್ತು ಸಂಪತ್ತು ತುಂಬಿರುತ್ತದೆ ಎಂದು ನಂಬಲಾಗಿದೆ. ವಿಶೇಷವಾಗಿ ನೀವು ಚಿನ್ನ ಇಡುವ ಸ್ಥಳದಿಂದ ಈ ಇರುವೆಗಳು ಹೊರಬಂದರೆ ಅದು ಹೆಚ್ಚುತ್ತಿರುವ ಸಂಪತ್ತಿನ ಸಂಕೇತವಾಗಿದೆ.