ಬೆಂಗಳೂರು:- ಅನೇಕರು ತಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಲು ತಮ್ಮ ಸ್ಥಳೀಯ ಆಧಾರ್ ಕೇಂದ್ರಗಳಿಗೆ ದೌಡಾಯಿಸುತ್ತಿದ್ದಾರೆ. ಆದರೆ ಈ ವರದಿಗಳು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ತಿಳಿದುಕೊಳ್ಳಲು ಈಗ ತುಂಬಾನೇ ಕಾತುರರಾಗಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಈ ಎಲ್ಲಾ ವರದಿಗಳು ಸುಳ್ಳಾಗಿರುವುದರಿಂದ ದೇಶದ ಜನರು ಚಿಂತಿಸಬೇಕಾಗಿಲ್ಲವಂತೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತೆ ಹಲವಾರು ನವೀಕರಣಗಳನ್ನು ಈಗಾಗಲೇ ಒದಗಿಸಿದೆ. ಯುಐಡಿಎಐ ಪ್ರಕಾರ, ನೀವು ಕಳೆದ 10 ವರ್ಷಗಳಲ್ಲಿ ನಿಮ್ಮ ಆಧಾರ್ಕಾರ್ಡ್ ಅನ್ನು ನವೀಕರಿಸದಿದ್ದರೆ, ನೀವು ಯುಐಡಿಎಐ ಪೋರ್ಟಲ್ ಮೂಲಕ ಜೂನ್ 14 ರವರೆಗೆ ಅದನ್ನು ಉಚಿತವಾಗಿ ನವೀಕರಿಸಬಹುದು. ಈ ಸೇವೆ ಆನ್ಲೈನ್ ಮತ್ತು ಆಧಾರ್ ಕೇಂದ್ರಗಳಲ್ಲಿ ಲಭ್ಯವಿದೆ.
ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಲು, ನೀವು ಯುಐಡಿಎಐ ವೆಬ್ಸೈಟ್ ಅಥವಾ ಸ್ಥಳೀಯ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬಹುದು. ಯುಐಡಿಎಐ ಪೋರ್ಟಲ್ ಮೂಲಕ ನಿಮ್ಮ ಆಧಾರ್ ಅನ್ನು ಆನ್ಲೈನ್ನಲ್ಲಿ ನವೀಕರಿಸಲು ಯಾವುದೇ ಶುಲ್ಕವನ್ನು ನೀವು ಕಟ್ಟಬೇಕಿಲ್ಲ, ಆಧಾರ್ ಕೇಂದ್ರದಲ್ಲಿ ಅದನ್ನು ನವೀಕರಿಸಲು ನಿಮಗೆ ಕೇವಲ 50 ರೂಪಾಯಿ ನೀಡಬೇಕಾಗುತ್ತದೆ ಅಷ್ಟೇ.
ಜೂನ್ 14 ರ ನಂತರ ನಿಮ್ಮ ಆಧಾರ್ಕಾರ್ಡ್ ಅಮಾನ್ಯವಾಗುವುದಿಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ. ಇದು ಮೊದಲಿನಂತೆಯೇ ಮಾನ್ಯವಾಗಿರುತ್ತದೆ ಮತ್ತು ಎಂದಿಗೂ ನೀವು ಇದನ್ನು ಬಳಸಬಹುದಾಗಿದೆ. ಒಂದೇ ಬದಲಾವಣೆ ಎಂದರೆ ಈ ದಿನಾಂಕದ ನಂತರ ಉಚಿತ ಅಪ್ಡೇಟ್ ಸೌಲಭ್ಯ ಲಭ್ಯವಿರುವುದಿಲ್ಲ. ಕೇಂದ್ರವು ಈಗ ಜೂನ್ 14, 2024 ರವರೆಗೆ ಆಧಾರ್ ವಿವರಗಳನ್ನು ಉಚಿತವಾಗಿ ನವೀಕರಿಸುವ ಗಡುವನ್ನು ವಿಸ್ತರಿಸಿದೆ. ಇದಕ್ಕೂ ಮೊದಲು, ಮಾರ್ಚ್ 14 ಗಡುವು ನೀಡಿತ್ತು, ಆದರೆ ಯುಐಡಿಎಐ ಉಚಿತ ಆನ್ಲೈನ್ ಡಾಕ್ಯುಮೆಂಟ್ ಅಪ್ಲೋಡ್ ಮಾಡುವ ಸೌಲಭ್ಯವನ್ನು ಜೂನ್ 14 ರವರೆಗೆ ವಿಸ್ತರಿಸಿದೆ.
ಜನರು ಆನ್ಲೈನ್ನಲ್ಲಿ ತಮ್ಮ ಆಧಾರ್ ಸಂಖ್ಯೆಯನ್ನು ನವೀಕರಿಸಿದರೆ ಮಾತ್ರ ಉಚಿತ ನವೀಕರಣದ ಸೌಲಭ್ಯವನ್ನು ಪಡೆಯುತ್ತಾರೆ. ಆದಾಗ್ಯೂ, ಅವರು ಆಧಾರ್ ಸೇವಾ ಕೇಂದ್ರಕ್ಕೆ ಹೋಗುವ ಮೂಲಕ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಲು ಪಾವತಿಸಬೇಕಾಗುತ್ತದೆ