ಬಾಗಲಕೋಟೆ:- ರಾಜ್ಯದಲ್ಲಿ ಕೈ ಸರ್ಕಾರ ಇದೇಯೋ, ಸತ್ತಿದೆಯೋ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಮುರುಗೇಶ್ ನಿರಾಣಿ ಹರಿಹಾಯ್ದಿದ್ದಾರೆ.
ಹಿಂದಿನ ನಮ್ಮ ಸರಕಾರ ಪ್ರಾರಂಭಿಸಿದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ಸರಕಾರ ಅರ್ಧಕ್ಕೆ ನಿಲ್ಲಿಸಿದೆ. ಜೊತೆಗೆ ನೂತನ ಯೋಜನೆಗಳನ್ನು ಜಾರಿಗೆ ತರುತಿಲ್ಲ ಎಂದು ಆರೋಪಿಸಿದರು.
ಹಿಜಾಬ್ ವಿಷಯ ಸುಪ್ರೀಂ ಕೋರ್ಟ್ನಲ್ಲಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಿಜಾಬ್ ಬಗ್ಗೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆಯೊಂದು ಹೇಳಿಕೆ ನೀಡಿದ್ದಾರೆ. ಮುಸ್ಲಿಮರಿಗೆ ₹10 ಸಾವಿರ ಕೋಟಿ ಮೀಸಲಿಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಹಿಂದೂಗಳಿಗೆ ಏನು ಇಲ್ಲ. ಇಂತಹ ಸರಕಾರವನ್ನು ಕಿತ್ತೊಗೆಯಲು ಜನ ಕಾಯುತ್ತಿದ್ದಾರೆ ಎಂದರು.
ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯಮಟ್ಟದ ನೂತನ ಪದಾಧಿಕಾರಗಳೊಂದಿಗೆ ಬೆಂಗಳೂರಿನಲ್ಲಿ ಡಿ.26ರಂದು ಸಭೆ ಹಮ್ಮಿಕೊಳ್ಳಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ವಾರದಲ್ಲಿ ಜಿಲ್ಲೆಗೆ ಕರೆಸಲಾಗುತ್ತದೆ ಎಂದು ತಿಳಿಸಿದರು.
ನಾನು ಲೋಕಸಭೆ ಟಿಕೆಟ್ ಕೇಳಿಲ್ಲ. ಇಲ್ಲಿಯವರೆಗೆ ನಾನು ಯಾವುದೇ ಜವಾಬ್ದಾರಿಗಳನ್ನು ಕೇಳಿಲ್ಲ. ನನಗೆ ಬಂದಿರುವ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದರು.