ಬೆಳಗಾವಿ:– ರಾಜ್ಯದಲ್ಲಿ ಪೊಲೀಸ್ ಇಲಾಖೆ ಸತ್ತು ಹೋಗಿದ್ಯಾ!? ಎಂಬ ಅನುಮಾನ ಮೂಡಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬೆಳಗಾವಿಯಲ್ಲಿ ಪೊಲೀಸ್ ವ್ಯವಸ್ಥೆ ವೈಫಲ್ಯ ಕಂಡಿದೆ. ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ್ದೂ ಸೇರಿದಂತೆ ಇತ್ತೀಚೆಗೆ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ದೂರಿದರು.
ಕಾಂಗ್ರೆಸಿಗರು ಹಿಂದೂ, ಮುಸ್ಲಿಂ ನಡುವೆ ಗಲಾಟೆ ಸೃಷ್ಟಿಸಿ, ಅದರಿಂದಾಗಿಯೇ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಸಂಚು ರೂಪಿಸಿದ್ದಾರೆ. ಹೀಗಾಗಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಹುಬ್ಬಳ್ಳಿಯ ಕರಸೇವಕ ಪ್ರಕರಣದಲ್ಲಿ 14 ಕೇಸುಗಳಿವೆ ಎಂದು ಸುಳ್ಳು ಹೇಳಿದರು. ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಬೇಕಾಯಿತು. ಇದಕ್ಕೆ ಜನರೂ ಬೆಂಬಲ ನೀಡಿದರು. ಕೋರ್ಟಿಗೂ ಮನವರಿಕೆಯಾಗಿ ಬಂಧಿತನಿಗೆ ಜಾಮೀನು ಸಿಕ್ಕಿದೆ ಎಂದು ಹೇಳಿದರು.
ಮುಖ್ಯಮಂತ್ರಿಯವರು ಹುಬ್ಬಳ್ಳಿಯಷ್ಟೇ ಅಲ್ಲ, ಹಿಜಾಬ್ ವಿಷಯದಲ್ಲೂ ನ್ಯಾಯಾಲಯವನ್ನು ಮೀರಿ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಅಲ್ಪಸಂಖ್ಯಾತರನ್ನು ಓಲೈಸುವುದೇ ದೊಡ್ಡ ಕೆಲಸವಾಗಿದೆ ಎಂದರು. ನೈತಿಕ ಪೊಲೀಸ್ಗಿರಿ ಪ್ರಕರಣದಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರ ಮೃದು ಧೋರಣೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಎಲ್ಲರೂ ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಈಶ್ವರಪ್ಪ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಪೊಲೀಸ್ ಇಲಾಖೆ ಸತ್ತು ಹೋಗಿದೆಯೇ ಎಂಬ ಅನುಮಾನಗಳು ಬರುತ್ತಿವೆ. ರಾಜ್ಯಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಪಾಠ ಕಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು. ಬಿಜೆಪಿಯವರ ವಿರುದ್ಧ ಎಷ್ಟೇ ಪ್ರಕರಣಗಳನ್ನು ದಾಖಲಿಸಿದರೂ ನಾವು ಹೆದರುವುದಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಲಕ್ಷಾಂತರ ಪ್ರಕರಣವನ್ನು ದಾಖಲಿಸಲಾಗಿತ್ತು. ಈಗ ಬೇಕಿದ್ದರೆ ಅವುಗಳಿಗೂ ಮರುಜೀವ ನೀಡಲಿ. ನಮಗೆ ಯಾವುದೇ ಅಂಜಿಕೆಯಿಲ್ಲ ಎಂದು ಹೇಳಿದರು.