ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವುದು ನಮಗೆಲ್ಲರಿಗೂ ತಿಳಿದಿರುವಂತಹ ವಿಚಾರ. ಇನ್ನು ಹಾಲಿನ ಉಪ ಉತ್ಪನ್ನಗಳಾಗಿರುವಂತಹ ಮೊಸರು, ಮಜ್ಜಿಗೆ, ತುಪ್ಪ ಬೆಣ್ಣೆ ಇತ್ಯಾದಿಗಳು ಕೂಡ ಆರೋಗ್ಯಕಾರಿ. ಆದ್ರೆ ಮನೆಯಲ್ಲಿ ಚಳಿಗಾಲದ ಸಮಯದಲ್ಲಿ ಸರಿಯಾಗಿ ಮೊಸರು ಸಹ ಆಗುವುದಿಲ್ಲ ಎಂದು ಹೆಂಗಸರು ಕಂಪ್ಲೇಂಟ್ ಹೇಳುತ್ತಾರೆ.
ಇದು ನಿಜ ಕೂಡ. ಏಕೆಂದರೆ ಹಾಲು ಹೆಪ್ಪಿನ ಪ್ರಭಾವದಿಂದ ಮೊಸರಾಗಿ ಬದಲಾಗಲು ಅದಕ್ಕೆ ಸಹಕಾರಿಯಾದ ತಾಪಮಾನ ಹೊರಗೆ ಇರುವುದಿಲ್ಲ. ಹೀಗಾಗಿ ನೀವು ಹೆಪ್ಪು ಹಾಕಿ ಹಾಲನ್ನು ಎಷ್ಟೇ ಹೊತ್ತು ಹಾಗೆ ಇಟ್ಟರೂ ಕೂಡ ಅದು ಹಾಗೆ ಇರುತ್ತದೆ. ಚಳಿಗಾಲದಲ್ಲಿ ಮೊಸರನ್ನು ಸುಲಭವಾಗಿ ತಯಾರು ಮಾಡುವ ಕೆಲವು ಟಿಪ್ಸ್ ಗಳನ್ನು ನೀವು ತಿಳಿದುಕೊಳ್ಳಬೇಕು. ಈ ಲೇಖನದಲ್ಲಿ ಅವುಗಳ ಬಗ್ಗೆ ತಿಳಿಸಲಾಗಿದೆ.
ಬಿಸಿ ಹಾಲನ್ನು ಬಳಸಿ
ಹಾಲಿಗೆ ಹೆಪ್ಪು ಹಾಕುವ ಮೊದಲು ಹಾಲನ್ನು ಸ್ವಲ್ಪ ಬಿಸಿ ಮಾಡಿ. ಬೇಸಿಗೆಯಲ್ಲಿ ಉಗುರು ಬೆಚ್ಚಗಿನ ಹಾಲು ಸಾಕಾಗುತ್ತದೆ. ಆದರೆ, ಚಳಿಗಾಲದಲ್ಲಿ ಸ್ವಲ್ಪ ಹೆಚ್ಚೇ ಬೇಕಾಗುತ್ತದೆ ಎಂಬುದನ್ನು ನೆನಪಿಡಿ. ಆದರೆ, ತೀರಾ ಕುದಿಯುವ ಮಟ್ಟದ ಬಿಸಿಯೂ ಮಾಡಬೇಡಿ.
ಕ್ಯಾಸೆರೋಲ್ ಬಳಸಿ
ಬೇಸಿಗೆಯಲ್ಲಿ ಸ್ಟೀಲ್, ಗಾಜು, ಪಿಂಗಾಣಿ ಅಥವಾ ಯಾವುದೇ ಬಗೆಯ ಪಾತ್ರೆಯಲ್ಲಿ ಮೊಸರು ಮಾಡಲು ಹೆಪ್ಪು ಹಾಕಿದರೆ ನಡೆಯುತ್ತದೆ. ಆದರೆ, ಚಳಿಗಾಲದಲ್ಲಿ ಕ್ಯಾಸೆರೋಲ್ ಬಳಸಿ. ಇದರಲ್ಲಿ ನಿಮಗೆ ಸುಲಭವಾಗಿ ಈ ಸಮಸ್ಯೆಗೆ ಪರಿಹಾರ ಕಾಣುತ್ತದೆ. ಈ ಪಾತ್ರೆ ಬೆಚ್ಚಗೇ ಇಡುವುದರಿಂದ ಇದರಲ್ಲಿ ಮೊಸರು ಸುಲಭವಾಗಿ ಆಗುತ್ತದೆ.
ಹೆಚ್ಚು ಹೆಪ್ಪು ಹಾಕಿ
ಚಳಿಗಾಲದಲ್ಲಿ ಹಾಲಿಗೆ ಹಾಕುವ ಹೆಪ್ಪು ಬೇಸಗೆಯ ಪ್ರಮಾಣಕ್ಕಿಂತ ಹೆಚ್ಚಿರಲಿ. ಉದಾಹರನೆಗೆ ಬೇಸಿಗೆಯಲ್ಲಿ ಒಂದು ಚಮಚ ಹೆಪ್ಪು ಹಾಕಿದರೆ, ಚಳಿಗಾಲದಲ್ಲಿ ಅದೇ ಅಳತೆಯ ಹಾಲಿಗೆ ಎರಡು ಚಮಚ ಹೆಪ್ಪು ಹಾಕಿ.
ಮೈಕ್ರೋವೇವ್ ಒಳಗಿಡಿ
ಹಾಲಿಗೆ ಹೆಪ್ಪು ಹಾಕಿದ ಮೇಲೆ ಆ ಪಾತ್ರೆಯನ್ನು ಮುಚ್ಚಿದ ಪ್ರದೇಶದೊಳಗಿಡಿ. ಉದಾಹರಣೆಗೆ ಮೈಕ್ರೋವೇವ್ ಅವನ್ ಒಳಗೆ ಇಟ್ಟು ಬಾಗಿಲು ಮುಚ್ಚಬಹುದು. ಅದು ಅಲ್ಲಾಡದೆ ಹಾಗೆಯೇ ಅಲ್ಲಿರಲಿ.
ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿಡಿ
ಇನ್ನೊಂದು ಬಹಳ ಇಂಟರೆಸ್ಟಿಂಗ್ ಐಡಿಯಾ ಎಂದರೆ ಹಾಲಿಗೆ ಹೆಪ್ಪು ಹಾಕಿದ ಮೇಲೆ ಆ ಪಾತ್ರೆಯನ್ನು ಒಂದು ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿಡಿ. ನಿಮ್ಮ ಹಳೆಯ ಸ್ವೆಟರ್ ಕೂಡಾ ಸರಿಯೇ. ಇದು ತಣ್ಣಗಿನ ಗಾಳಿ ಅದನ್ನು ಸ್ಪರ್ಶಿಸದಂತೆ ತಡೆದು, ಮೊಸರಾಗುವ ಕೆಲಸಕ್ಕೆ ಸಹಾಯ ಮಾಡುತ್ತದೆ.
ಬೆಳಗ್ಗೆ ಮಾಡಿ
ರಾತ್ರಿಯ ಸಮಯ ಹೆಚ್ಚು ಚಳಿ ಇರುವುದರಿಂದ, ರಾತ್ರಿ ಮಲಗುವ ಮೊದಲು ಹೆಪ್ಪು ಹಾಕಿಡುವ ಅಭ್ಯಾಸವನ್ನು ಬೆಳಗ್ಗೆ ಮಾಡಿ. ಬೆಳಗಿನ ಗೊತ್ತು ರಾತ್ರಿಗಿಂತ ಉಷ್ಣತೆ ಹೆಚ್ಚಿರುತ್ತದೆ.
ಬಿಸಿ ನೀರು ಹಾಕಿಡಿ
ಒಂದು ದೊಡ್ಡ ಕ್ಯಾಸೆರೋಲ್ ಒಳಗೆ ಬಿಸಿ ನೀರು ಹಾಕಿ, ಅದರೊಳಗೆ ಹೆಪ್ಪು ಹಾಕಿದ ಪಾತ್ರೆಯನ್ನಿಟ್ಟು ಮುಚ್ಚಳ ಮುಚ್ಚಿ. ಕ್ಯಾಸರೋಲ್ ಒಳಗಿನ ನೀರು ಬೆಚ್ಚಗೇ ಉಳಿಯುವುದರಿಂದ ಇದು ಇನ್ನೊಂದು ಪಾತ್ರೆಯನ್ನೂ ಬೆಚ್ಚಗಿಟ್ಟಿರುತ್ತದೆ ಹಾಗೂ ಮೊಸರಾಗುವಂತೆ ಮಾಡುತ್ತದೆ.