ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇದು ನಿಮ್ಮ ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ. ನಮ್ಮಲ್ಲಿ ಹಲವರು ಚಳಿಗಾಲದಲ್ಲಿ ಮೊಸರು ತಿನ್ನಲು ಇಷ್ಟಪಡುವುದಿಲ್ಲ. ಯಾಕೆಂದರೆ ಮೊಸರು ತಿನ್ನುವುದರಿಂದ ಶೀತ ಆಗುತ್ತದೆ.
ಚಳಿಗಾಲದಲ್ಲಿ ಇದು ಕಫ ಮತ್ತು ಶೀತವನ್ನು ಉಂಟುಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ ಅಥವಾ ಬೇಡವೇ ಎಂಬುವ ಪ್ರಶ್ನೆ ಹಲವರಲ್ಲಿದೆ. ಇಲ್ಲಿದೆ ನೋಡಿ!
ಅಂತೆಯೇ, ಮೊಸರು ತನ್ನ ಗುರು, ಸ್ನಿಗ್ಧ, ಅಭಿಷ್ಯಂಧಿ ಗುಣಗಳಿಂದ ಕಫ ದೋಷವನ್ನು ಸಹ ಹೆಚ್ಚಿಸುತ್ತದೆ. ಈ ಕಫ ದೋಷವು ತಲೆ ನೋವು, ತಲೆ ಭಾರ, ದಮ್ಮು, ಗಂಟಲು ನೋವು ಮುಂತಾದವು ಗಳನ್ನು ಉಂಟುಮಾಡಬಹುದು. ಇಂದು ನಾವೆಲ್ಲರೂ ಮೊಸರನ್ನು ಫ್ರಿಡ್ಜ್ ನಲ್ಲಿಟ್ಟು ಹಾಗೆಯೇ ಕೊರೆಯುವ ಥಂಡಿಯಲ್ಲೇ ಸೇವಿಸುವುದರಿಂದ ಈ ಕಫ ದೋಷದ ವೃದ್ಧಿಯೇ ಮುನ್ನೆಲೆಗೆ ಬಂದು ಮೊಸರು ತಂಪೆನ್ನುವ ಕಲ್ಪನೆ ಬೆಳೆದಿರಬಹುದು.
ಆಯುರ್ವೇದದ ಪ್ರಕಾರ ಹಾಲಿಗೆ ಹೆಪ್ಪು ಹಾಕಿ ಒಂದು ರಾತ್ರಿ ಕಾಲ ಇಟ್ಟರೆ ದಧಿ, ಅಥವಾ ನಾವು ಮೊಸರೆಂದು ಕರೆಯುವ ದ್ರವ್ಯ ಸಿದ್ಧವಾಗುತ್ತದೆ. ಈ ಮೊಸರನ್ನು ಮಂಥನ ಮಾಡಿ, ಅದರಿಂದ ಬಂದಂತಹ ನವನೀತವನ್ನು ಬೇರ್ಪಡಿಸಿದಾಗ ಉಳಿಯುವ ದ್ರವ್ಯವೇ ತಕ್ರ. ಅದನ್ನು ನಾವು ಆಡುಭಾಷೆಯಲ್ಲಿ ಮಜ್ಜಿಗೆ ಎಂದೇ ಕರೆದರೂ, ಇದಕ್ಕೂ, ಮೊಸರಿಗೆ ನೀರು ಸೇರಿಸಿದಾಗ ಸಿಗುವ ಮಜ್ಜಿಗೆಗೂ ವ್ಯತ್ಯಾಸವಂತೂ ಇದೆ. ಅದೇನೇ ಇರಲಿ, ನೆನಪಿಡಬೇಕಾದ ವಿಷಯವೆಂದರೆ ಈ ಎರಡೂ ಮಜ್ಜಿಗೆಗಳೂ ಉಷ್ಣ ಕಾಲದಲ್ಲಿ (ಬೇಸಿಗೆಯಲ್ಲಿ) ನಿಷಿದ್ಧ. ಅಂದರೆ, ಬಿಸಿಲಿನಲ್ಲಿ ಸುಸ್ತಾಗಿ ಬಂದವರಿಗೆ ಮಜ್ಜಿಗೆ ಕೊಡುವ ನಮ್ಮ ಪದ್ಧತಿ ನಿಜವಾಗಿ ಅವೈಜ್ಞಾನಿಕ.
ಹಾಗೆಂದು ಶೀತಕಾಲದಲ್ಲಿ ಮೊಸರು ತಿನ್ನಬಹುದೇ? ಕಣ್ಣು ಮುಚ್ಚಿ ಹೌದೆಂದು ಹೇಳಲು ಸಾಧ್ಯವಿಲ್ಲ. ಈ ಮೊದಲೇ ಹೇಳಿದಂತೆ ಅದು ಕಫದೋಷವನ್ನು ವೃದ್ಧಿ ಮಾಡುವುದರಿಂದ ರಾತ್ರಿಯ ಸಮಯದಲ್ಲಿ, ಕಫದ ತೊಂದರೆ ಇರುವವರಿಗೆ ಸಹ ಮೊಸರು ಕೊಡುವಂತಿಲ್ಲ. ವರ್ಷಾನುಗಟ್ಟಲೆ ರಾತ್ರಿ ಬರೀ ಮೊಸರನ್ನ ತಿನ್ನುವ ಅಭ್ಯಾಸವಿರುವವರು ಮುಂದೆ ಕಫ ಪ್ರಧಾನ ರೋಗಗಳಾದ ಸ್ಥೌಲ್ಯ, ಮಧುಮೇಹಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಹಾಗೆಯೇ, ಸಣ್ಣ ಮಕ್ಕಳಲ್ಲಿ ಪದೇ ಪದೇ ಕಫದ ತೊಂದರೆಗಳು (ಉದಾ: ನೆಗಡಿ, ಕೆಮ್ಮು, ದಮ್ಮು) ಕಾಣಿಸಿಕೊಂಡರೆ ಸ್ವಲ್ಪ ಸಮಯ ಮೊಸರಿನ ಸೇವನೆ ನಿಲ್ಲಿಸಿ ನೋಡಬಹುದು.
ಹಾಗಾದರೆ ಮೊಸರು ಮಜ್ಜಿಗೆ ಸೇವನೆ ತಪ್ಪೇ?
ಖಂಡಿತ ಅಲ್ಲ. ಆಯುರ್ವೇದವು ಮೊಸರನ್ನು ಮಂಗಳಕರವೆಂದು ಕರೆದಿದೆ. ಎಂದರೆ, ಸರಿಯಾದ ಕ್ರಮದಲ್ಲಿ, ಸಹಜವಾಗಿ ತಯಾರಿಸಿದ ತಾಜಾ ಮೊಸರು ದೇಹಕ್ಕೆ ಬಲವನ್ನು, ಪುಷ್ಟಿಯನ್ನು ಕೊಡುತ್ತದೆ; ಬಾಯಿರುಚಿಯನ್ನು ಹೆಚ್ಚಿಸುತ್ತದೆ; ಜೀರ್ಣ ಶಕ್ತಿಯನ್ನು ವೃದ್ಧಿ ಮಾಡುತ್ತದೆ; ವಾತ ದೋಷವನ್ನು ಸಮಸ್ಥಿತಿಗೆ ತರುತ್ತದೆ.
ಇನ್ನು ಮಜ್ಜಿಗೆಯನ್ನಂತೂ (ಮೇಲೆ ಹೇಳಿದ ತಕ್ರ) ಹಲವು ಕಡೆಗಳಲ್ಲಿ ಅಮೃತವೆಂದು ಕರೆಯಲಾಗಿದೆ. ಕಷಾಯರಸ ಪ್ರಧಾನವಿರುವ, ಉಷ್ಣವೀರ್ಯದ ಆದರೆ ಮಧುರ ವಿಪಾಕದ ಮಜ್ಜಿಗೆಯು ಉತ್ತಮ ಅಗ್ನಿ ದೀಪಕ. (ಇದನ್ನು ನಾವು ಇಂದಿನ ಭಾಷೆಯಲ್ಲಿ gut bacteria ದ ವೃದ್ದಿ ಎಂದು ಅರ್ಥೈಸಬಹುದು).
ವಾತ-ಕಫದ ರೋಗಗಳಲ್ಲಿ ಮಜ್ಜಿಗೆಗಿಂತ ಉತ್ತಮ ಔಷಧಿ ಮತ್ತೊಂದಿಲ್ಲ ಎಂದು ಹೇಳಲಾಗಿದೆ. ವಿಜ್ಞಾನವು ಭೋಜನದ ಕೊನೆಯಲ್ಲಿ ಕಷಾಯರಸವನ್ನು ಸೇವಿಸಬೇಕು ಎನ್ನುತ್ತದೆ. ಹಾಗಾಗಿ ಊಟದ ಕೊನೆಗೆ ಮಜ್ಜಿಗೆ ಕುಡಿಯುವ, ಮಜ್ಜಿಗೆ ಕಲಸಿದ ಅನ್ನ ಉಣ್ಣುವ ಅಭ್ಯಾಸ ಬಹಳ ಒಳ್ಳೆಯದು .