ಟೆಹ್ರಾನ್ : ಇಂಟರ್ ನೆಟ್ ನಿರ್ಬಂಧವನ್ನು ಸಡಿಲಗೊಳಿಸುವ ಮೊದಲ ಹಂತವಾಗಿ `ಮೆಟಾ’ದ ಸಾಮಾಜಿಕ ಮಾಧ್ಯಮಗಳಲ್ಲಿನ ವಾಟ್ಸ್ಯಾಪ್ ಮತ್ತು ಗೂಗಲ್ ಪ್ಲೇ ಮೇಲಿನ ನಿಷೇಧವನ್ನು ಇರಾನ್ ತೆರವುಗೊಳಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಇರಾನ್ ವಿಶ್ವದ ಕೆಲವು ಕಟ್ಟುನಿಟ್ಟಾದ ಇಂಟರ್ ನೆಟ್ ನಿಯಂತ್ರಣವನ್ನು ಹೊಂದಿದೆ. ಆದರೂ, ವರ್ಚುವಲ್ ಪ್ರೈವೇಟ್ ನೆಟ್ವರ್ಕ್(ವಿಪಿಎನ್)ಗಳನ್ನು ಬಳಸುವ ಇರಾನಿಯನ್ನರು ಫೇಸ್ಬುಕ್, ಎಕ್ಸ್ ಮತ್ತು ಯೂ ಟ್ಯೂಬ್ನಂತಹ ಸಾಮಾಜಿಕ ವೇದಿಕೆ ಬಳಕೆಗೆ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ.
ಅಧ್ಯಕ್ಷ ಮಸೂದ್ ಪೆಝೆಷ್ಕಿಯಾನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾಟ್ಸ್ಯಾಪ್, ಗೂಗಲ್ ಪ್ಲೇ ಇತ್ಯಾದಿ ಕೆಲವು ಜನಪ್ರಿಯ ವಿದೇಶಿ ಸಾಮಾಜಿಕ ವೇದಿಕೆಗಳಿಗೆ ಪ್ರವೇಶದ ಮೇಲಿನ ಮಿತಿಯನ್ನು ತೆಗೆದು ಹಾಕಲು ಬಹುಮತದ ನಿರ್ಧಾರಕ್ಕೆ ಬರಲಾಗಿದೆ ಎಂದು ಇರಾನ್ ನ ಸರ್ಕಾರಿ ಸ್ವಾಮ್ಯದ ʼಇರ್ನಾ ಸುದ್ದಿಸಂಸ್ಥೆʼ ವರದಿ ಮಾಡಿದೆ.
ಇಂಟರ್ ನೆಟ್ ನಿರ್ಬಂಧ ರದ್ದತಿಯತ್ತ ಮೊದಲ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಇರಾನ್ ನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವ ಸತ್ತಾರ್ ಹಷೆಮಿ ಮಾಹಿತಿ ನೀಡಿದ್ದಾರೆ.