ಬೆಂಗಳೂರು:- IPS Vs IAS ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿಗೆ ಹೈಕೋರ್ಟ್ ರಿಲೀಫ್ ನೀಡಿದೆ. ಮಾನನಷ್ಟ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ದಾಖಲಿಸಿದ್ದ ಕೇಸ್ಗೆ ಮಧ್ಯಂತರ ತಡೆಯಾಜ್ಞೆ ನೀಡಿ ಹೈಕೋರ್ಟ್ ವಿಚಾರಣೆ ಮುಂದೂಡಿದೆ.
ಮಾ.12 ರ ವರೆಗೆ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿಕೆ ಮಾಡಿದೆ. ಅರ್ಜಿ ವಿಚಾರಣಾ ಸಂದರ್ಭದಲ್ಲಿ ರಾಜಿ ಸಂಧಾನಕ್ಕೆ ಪ್ರಯತ್ನಿಸುವಂತೆ ನ್ಯಾ.ಮೊಹಮ್ಮದ್ ನವಾಜ್ ಸಲಹೆ ನೀಡಿದ್ದಾರೆ.
ಬೆಂಗಳೂರಿನ 7 ನೇ ಎಸಿಎಂಎಂ ಕೋರ್ಟ್ಗೆ ರೂಪಾ ಖಾಸಗಿ ದೂರು ಸಲ್ಲಿಸಿದ್ದರು. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಕೋರ್ಟ್ ನೋಟಿಸ್ ನೀಡಿತ್ತು. 2023ರ ಫೆ.19 ರಂದು ರೋಹಿಣಿ ಸಿಂಧೂರಿ ಮಾಧ್ಯಮ ಹೇಳಿಕೆ ನೀಡಿದ್ದಾರೆ. ನಂತರ ಅದನ್ನು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಹೇಳಿಕೆಯಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಆರೋಪ ಮಾಡಿದ್ದಾರೆ. ಈ ಹೇಳಿಕೆಯನ್ನು 1.8 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ರೋಹಿಣಿ ಸಿಂಧೂರಿ ಅವರ ಅವಹೇಳನಕಾರಿ ಹೇಳಿಕೆ ನಂತರ ತಮ್ಮ ವರ್ಗಾವಣೆಯಾಗಿದೆ. 6 ತಿಂಗಳ ವರೆಗೆ ಸಂಬಳ ನೀಡದೇ ಹುದ್ದೆ ಇಲ್ಲದೇ ವರ್ಗಾಯಿಸಿದ್ದರು. ಈ ಹೇಳಿಕೆಯಿಂದ ನನ್ನ ತಂಗಿ, ಪತಿ, ಮಕ್ಕಳೂ ಮಾನಸಿಕ ಯಾತನೆ ಅನುಭವಿಸಿದ್ದಾರೆ ಎಂದು ರೋಹಿಣಿ ವಿರುದ್ಧ ರೂಪಾ ಮಾನನಷ್ಟ ಮೊಕದ್ದಮೆ ಹೂಡಿದ್ದರು.