ಕಳೆದ 17 ಆವೃತ್ತಿಗಳಲ್ಲಿ ಐಪಿಎಲ್ ಕಪ್ ಎತ್ತಿ ಹಿಡಿಯುವಲ್ಲಿ ವಿಫಲವಾಗಿರುವ ಆರ್ಸಿಬಿ ಈ ಬಾರಿ ಹೇಗಾದರೂ ಮಾಡಿ ಕಪ್ ಜಯಿಸಬೇಕೆಂದು ಪಣ ತೊಟ್ಟಿದೆ. ಇದಕ್ಕಾಗಿ ಜೆಡ್ಡಾದಲ್ಲಿ ಇತ್ತೀಚೆಗೆ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿ ಮಾಡಿ ಬಲಿಷ್ಠ ತಂಡವನ್ನು ಕಟ್ಟಿದೆ. 8 ವಿದೇಶಿ ಆಟಗಾರರು ಸೇರಿ ಒಟ್ಟು 22 ಪ್ಲೇಯರ್ಸ್ ಆರ್ಸಿಬಿ ತಂಡದಲ್ಲಿದ್ದಾರೆ. ಆದರೆ ಹರಾಜಿನಲ್ಲಿ ಆರ್ಸಿಬಿ ಖರೀದಿಸಿದವರ ಪೈಕಿ ಮೂವರು ಸ್ಟಾರ್ ಆಟಗಾರರು ಇತ್ತೀಚಿನ ಟಿ20 ಪಂದ್ಯಗಳಲ್ಲಿ ಫ್ಲಾಪ್ ಆಗಿದ್ದು, ಆರ್ಸಿಬಿಗರ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ.
ಗಣರಾಜ್ಯೋತ್ಸವದಲ್ಲಿ ಗಮನ ಸೆಳೆದ PM ಮೋದಿ ಉಡುಗೆ: Wow ಎಂದ ನೆಟ್ಟಿಗರು!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಐಪಿಎಲ್ ಸೀಸನ್-18 ಕ್ಕಾಗಿ ಬಲಿಷ್ಠ ಪಡೆಯನ್ನೇ ರೂಪಿಸಿದೆ. ಮೆಗಾ ಹರಾಜಿಗೂ ಮುನ್ನ ಮೂವರನ್ನು ಉಳಿಸಿಕೊಂಡಿದ್ದ ಆರ್ಸಿಬಿ, ಆಕ್ಷನ್ ಮೂಲಕ 19 ಆಟಗಾರರನ್ನು ಖರೀದಿಸಿದೆ. ಈ ಹತ್ತೊಂಬತ್ತು ಆಟಗಾರರಲ್ಲಿ ಇಂಗ್ಲೆಂಡ್ನ ಇಬ್ಬರು ಸ್ಪೋಟಕ ದಾಂಡಿಗರು ಕೂಡ ಇದ್ದಾರೆ. ಹೀಗಾಗಿಯೇ ಈ ಬಾರಿ ಆರ್ಸಿಬಿ ಪರ ಆಂಗ್ಲರ ಆರ್ಭಟವನ್ನು ನಿರೀಕ್ಷಿಸಲಾಗುತ್ತಿದೆ.
ಆದರೆ ಐಪಿಎಲ್ ಆರಂಭಕ್ಕೂ ಮುನ್ನ ಭಾರತೀಯ ಪಿಚ್ನಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಯಲ್ಲಿ ಇಂಗ್ಲೆಂಡ್ ದಾಂಡಿಗರು ವಿಫಲರಾಗುತ್ತಿದ್ದಾರೆ. ಅದರಲ್ಲೂ ಆರ್ಸಿಬಿಯ ಕಲ್ಲುಪ್ಪು ಜೋಡಿ ಎಂದೇ ಗುರುತಿಸಿಕೊಂಡಿರುವ ಫಿಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಮೊದಲೆರಡು ಪಂದ್ಯಗಳಲ್ಲೂ ಅತ್ಯಂತ ಕಳಪೆ ಪ್ರರ್ದಶನ ನೀಡಿದ್ದಾರೆ
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ (0) ಅರ್ಷದೀಪ್ ಸಿಂಗ್ ಎಸೆತದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಅದು ಸಹ ಮೊದಲ ಓವರ್ನ ಮೂರನೇ ಎಸೆತದಲ್ಲಿ ಎಂಬುದು ವಿಶೇಷ.
ಪಂದ್ಯದಲ್ಲಿ ಲಿಯಾಮ್ ಲಿವಿಂಗ್ಸ್ಟೋನ್ ಎದುರಿಸಿದ್ದು ಕೇವಲ 2 ಎಸೆತಗಳನ್ನು ಮಾತ್ರ. ಅಷ್ಟರಲ್ಲಿ ಲಿವಿಂಗ್ಸ್ಟೋನ್ಗೆ (0) ಪೆವಿಲಿಯನ್ ಹಾದಿ ತೋರಿಸುವಲ್ಲಿ ವರುಣ್ ಚಕ್ರವರ್ತಿ ಯಶಸ್ವಿಯಾಗಿದ್ದರು. ಅಂದರೆ ಆರ್ಸಿಬಿ ತಂಡದಲ್ಲಿರುವ ಇಬ್ಬರು ಆಟಗಾರರು ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೊನ್ನೆ ಸುತ್ತಿ ನಿರಾಸೆ ಮೂಡಿಸಿದ್ದರು.
ದ್ವಿತೀಯ ಪಂದ್ಯದಲ್ಲೂ ಉಭಯ ದಾಂಡಿಗರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಈ ಪಂದ್ಯದಲ್ಲೂ ಆರಂಭಿಕನಾಗಿ ಕಣಕ್ಕಿಳಿದ ಸಾಲ್ಟ್ ಅರ್ಷದೀಪ್ ಸಿಂಗ್ ಎಸೆತದಲ್ಲಿ ಒಂದು ಫೋರ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ
ಈ ಬಾರಿ ಆರ್ಸಿಬಿ ಪರ ಇನಿಂಗ್ಸ್ ಆರಂಭಿಸಲಿರುವುದು ಫಿಲ್ ಸಾಲ್ಟ್. ಇನ್ನು ಲಿಯಾಮ್ ಲಿವಿಂಗ್ಸ್ಟೋನ್ ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ಆಗಿ ಕಣಕ್ಕಿಳಿಯಲಿದ್ದಾರೆ. ಆದರೀಗ ಭಾರತೀಯ ಪಿಚ್ನಲ್ಲಿ ರನ್ಗಳಿಸುವುದಿರಲಿ, ಕ್ರೀಸ್ ಕಚ್ಚಿ ನಿಲ್ಲಲು ಫಿಲ್ ಸಾಲ್ಟ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ ಪರದಾಡುತ್ತಿದ್ದಾರೆ. ಈ ಕಳಪೆ ಪ್ರದರ್ಶನವೇ ಇದೀಗ ಆರ್ಸಿಬಿ ತಂಡದ ಬಲಿಷ್ಠತೆಯ ಮೇಲೆ ಪ್ರಶ್ನೆಗಳು ಮೂಡುವಂತೆ ಮಾಡಿದೆ.