ಮೈಸೂರು: ಬೆಟ್ಟಿಂಗ್ ಅನ್ನೋ ಮಾಯಾಜಾಲ ಯಾರನ್ನೂ ಬಿಟ್ಟಿಲ್ಲ. ಇದು ಕೇವಲ ಕರ್ನಾಟಕದ ಟ್ರೆಂಡ್ ಅಲ್ಲ. ಭಾರತ ದೇಶದ ಪ್ರತಿ ಹಳ್ಳಿಯಲ್ಲೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಟ್ಟಿಂಗ್ ದಂಧೆ ನಡೀತಿದೆ. ಅದರಲ್ಲೂ ಐಪಿಎಲ್ ಟೈಮಲ್ಲಿ 2 ತಿಂಗಳ ಕಾಲ ಬೆಟ್ಟಿಂಗ್ ಭರಾಟೆ ಜೋರಾಗಿರುತ್ತೆ. ಹಳ್ಳಿ ಹಳ್ಳಿಗಳಲ್ಲೂ ಯುವಕರು ಐಪಿಎಲ್ ಬೆಟ್ಟಿಂಗ್ ಮೋಹಕ್ಕೆ ಒಳಗಾಗಿದ್ದಾರೆ.
ಬೆಟ್ಟಿಂಗ್ ಕಟ್ಟಲು ಸಾಲ ಮಾಡ್ತಿದ್ದಾರೆ. ಕಡಿಮೆ ಟೈಂಗೆ ಹೆಚ್ಚು ಹಣ ಮಾಡಬಹುದು ಅನ್ನೋ ದುರಾಸೆಯಿಂದ ಇದ್ದ ಹಣವನ್ನೂ ಕಳೆದುಕೊಂಡು ಸಾಲದ ಸುಳಿಗೆ ಸಿಲುಕ್ತಿದ್ದಾರೆ. ಆಗಾಗ ಗೆಲ್ಲೋದೂ ಉಂಟು.. ಗೆದ್ದ ಹಣದಲ್ಲಿ ಮೋಜು – ಮಸ್ತಿ ಮಾಡಿ ಸಂಭ್ರಮಿಸುವ ಯುವಕರು, ಸೋತಾಗ ಮಾತ್ರ ಊರು ಬಿಟ್ಟು ಓಡಿ ಹೋದ ಉದಾಹರಣೆಗಳೂ ಇವೆ. ಕೆಲವರು ಆತ್ಮಹತ್ಯೆಯಂಥ ದಾರಿಯನ್ನೂ ಹಿಡಿದಿದ್ದಾರೆ.
ಇದೀಗ ಮೈಸೂರು ತಾಲ್ಲೂಕಿನ ಹಂಚ್ಯಾ ಗ್ರಾಮದಲ್ಲಿ ಐಪಿಎಲ್ ಮತ್ತು ಆನ್ಲೈನ್ ಬೆಟ್ಟಿಂಗ್ನಿಂದಾಗಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ನಡೆದಿದೆ. ಜೋಶಿ ಆಂಥೋನಿ, ಜೋಬಿ ಆಂಥೋನಿ ಮತ್ತು ಶರ್ಮಿಳಾ ಆತ್ಮಹತ್ಯೆ ಮಾಡಿಕೊಂಡವರು. ಜೋಬಿ ಮತ್ತು ಶರ್ಮಿಳಾ ಅಪಾರ ಸಾಲದಲ್ಲಿ ಸಿಲುಕಿದ್ದರು. ಜೋಶಿ ಆಂಥೋನಿ ಮೊದಲು ಆತ್ಮಹತ್ಯೆ ಮಾಡಿಕೊಂಡರು, ಬಳಿಕ ಅವರ ಸಹೋದರ ಮತ್ತು ಅವರ ನಾದಿನಿ ಆತ್ಮಹತ್ಯೆಗೆ ಶರಣಾದರು.
ಜೋಶಿ ಆಂಥೋನಿ ತನ್ನ ತಮ್ಮನಾದ ಜೋಬಿ ಆಂಥೋನಿ ಮತ್ತು ನಾದಿನಿ ಶರ್ಮಿಳಾ ಆಲಿಯಾಸಿ ಸ್ವಾತಿ ಮೇಲೆ ಮೋಸದ ಆರೋಪ ಹೊರಿಸಿ ಸೋಮವಾರ (ಫೆ.17) ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಜೋಶಿ ಆಂಥೋನಿ ವಿಡಿಯೋ ಮಾಡಿದ್ದು, “ಸಹೋದರ ಜೋಬಿ, ಆತನ ಪತ್ನಿ ಶರ್ಮಿಳಾ ಮೋಸದಿಂದ ನನ್ನ ಸಹೋದರಿ ಮೂಲಕ ಊರು ತುಂಬ ಸಾಲ ಪಡೆದು ಮೋಸ ಮಾಡಿದ್ದಾರೆ. ನನ್ನ ಸಹೋದರಿಗೆ ಗಂಡ ಇಲ್ಲ, ಅವರು ಮೋಸ ಮಾಡಿದ್ದಾರೆ. ನನ್ನ ಸಾವಿಗೆ ತಮ್ಮ ಜೋಬಿ ಆಂಥೋನಿ ಮತ್ತು ಆತನ ಪತ್ನಿ ಶರ್ಮಿಳಾ ಕಾರಣ. ಅವರಿಗೆ ಶಿಕ್ಷೆ ಕೊಡಿಸಿ” ಎಂದು ವಿಡಿಯೋದಲ್ಲಿ ಹೇಳಿ ನೇಣಿಗೆ ಶರಣದಾಗಿದ್ದಾರೆ.
ಜೋಶಿ ಆಂಥೋನಿ ಸಾವಿನ ವಿಚಾರ ತಿಳಿದು ತಮ್ಮ ಜೋಬಿ ಆಂಥೋನಿ ಹಾಗೂ ಈತನ ಪತ್ನಿ ಶರ್ಮಿಳಾ ಅಲಿಯಾಸಿ ಸ್ವಾತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೋಬಿ ಹಾಗೂ ಶರ್ಮಿಳಾ ಐಪಿಎಲ್ ಹಾಗೂ ಆನ್ ಲೈನ್ ಗೇಮ್ನಲ್ಲಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಪ್ರತಿ ನಿತ್ಯ ಮನೆಯ ಬಳಿ ಬಂದು ದುಡ್ಡು ಕೇಳುತ್ತಿದ್ದರು. ಇದರಿಂದ ಮನನೊಂದ ಜೋಷಿ ಆಂಥೋನಿ ಸೋಮವಾರ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು (ಫೆ.18) ಜೋಬಿ ಹಾಗೂ ಶರ್ಮಿಳಾ ವಿಜಯನಗರದ ಕ್ರೀಡಾ ಮೈದಾನದ ಬಳಿ ನೇಣಿಗೆ ಶರಣಾಗಿದ್ದಾರೆ.