ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 47 ರನ್ಗಳಿಂದ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಆರ್ ಸಿಬಿ 13 ನೇ ಪಂದ್ಯದಲ್ಲಿ 6 ನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿತು. ಡೆಲ್ಲಿ 13 ನೇ ಪಂದ್ಯದಲ್ಲಿ7 ನೇ ಸೋಲು ಅನುಭವಿಸಿ ಕೆಳಕ್ಕೆ ಜಾರಿತು. ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಆರ್ ಸಿಬಿ 9 ವಿಕೆಟಿಗೆ 187 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಿಷಭ್ ಪಂತ್ ಅವರ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್ ಅವರ ನಾಯಕತ್ವದಲ್ಲಿ ಆಡಲಿಳಿದ ಡೆಲ್ಲಿ ಆರಂಭಿಕ ಆಘಾತಕ್ಕೆ ಸಿಲುಕಿತು. ಬಿಗಿ ದಾಳಿ ನಡೆಸಿದ ಬೆಂಗಳೂರು ಬೌಲರ್ ಗಳು 30 ಕ್ಕೆ 4 ವಿಕೆಟ್ ಕಿತ್ತು ಭಾರೀ ಶಾಕ್ ನೀಡಿದರು. ವಾರ್ನರ್ 1, ಅಬ್ಬರಿಸಲು ಮುಂದಾದ ಜೇಕ್ ಫ್ರೇಸರ್-ಮ್ಯಾಕ್ಗುರ್ಕ್ 21 ಕ್ಕೆ ಆತ ಮುಗಿಸಿದರು. ಅಭಿಷೇಕ್ ಪೊರೆಲ್ 2 , ಶಾಯ್ ಹೋಪ್ 29, ಕುಮಾರ್ ಕುಶಾಗ್ರ 2 ರನ್ ಗಳಿಸಿ ದಿಟ್ಟ ಆಟವಾಡಲು ವಿಫಲರಾದರು. ನಾಯಕನ ಆಟ ವಾಡಿದ ಅಕ್ಷರ್ ಪಟೇಲ್ 57 ರನ್ ಗಳಿಸಿದ್ದ ವೇಳೆ ಕ್ಯಾಚಿತ್ತು ನಿರ್ಗಮಿಸಿದರು. 19.1 ಓವರ್ ಗಳಲ್ಲಿ 140 ರನ್ ಗಳಿಗೆ ಆಟ ಮುಗಿಸಿತು.
ಆರ್ ಸಿಬಿ ಪರ ಬಿಗಿ ದಾಳಿ ನಡೆಸಿದ ಯಶ್ ದಯಾಳ್ 3 ವಿಕೆಟ್ ಕಿತ್ತರು. ಲಾಕಿ ಫರ್ಗುಸನ್ 2,ಸ್ವಪ್ನಿಲ್ ಸಿಂಗ್, ಮೊಹಮ್ಮದ್ ಸಿರಾಜ್, ಕ್ಯಾಮರಾನ್ ಗ್ರೀನ್ ತಲಾ ಒಂದು ವಿಕೆಟ್ ಕಿತ್ತರು. ಒಂದು ಹಂತದಲ್ಲಿ ಬೆಂಗಳೂರು ತಂಡದ ಮೊತ್ತ 220ರ ತನಕ ತಲುಪಬಹುದೆಂಬ ನಿರೀಕ್ಷೆ ಇತ್ತು. ಆದರೆ ಡೆತ್ ಓವರ್ಗಳಲ್ಲಿ ಡೆಲ್ಲಿ ಬೌಲರ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ರಜತ್ ಪಾಟಿದಾರ್ ಅರ್ಧ ಶತಕ ಬಾರಿಸಿ ಮಿಂಚಿದರು (52). ಆರ್ಸಿಬಿ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. 4 ಓವರ್ಗಳೊಳಗಾಗಿ ಆರಂಭಿಕರಾದ ಫಾ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಆಟ ಮುಗಿಸಿ ವಾಪಸಾದರು. ನಾಯಕ ಡು ಪ್ಲೆಸಿಸ್ ಗಳಿಕೆ ಆರೇ ರನ್. ಕೊಹ್ಲಿ ಉತ್ತಮ ಲಯದಲ್ಲಿದ್ದರು. ಆದರೆ ಇನ್ನಿಂಗ್ಸ್ ಬೆಳೆಸಲು ಇಶಾಂತ್ ಶರ್ಮ ಅಡ್ಡಿಯಾದರು. ಕೊಹ್ಲಿ ಕೊಡುಗೆ 13 ಎಸೆತಗಳಿಂದ 27 ರನ್. ಇದು 3 ಸಿಕ್ಸರ್ ಹಾಗೂ ಒಂದು ಬೌಂಡರಿಯನ್ನು ಒಳಗೊಂಡಿತ್ತು. ಆದರೂ ಪವರ್ ಪ್ಲೇಯಲ್ಲಿ 61 ರನ್ ಪೇರಿಸುವಲ್ಲಿ ಆರ್ಸಿಬಿ ಯಶಸ್ವಿಯಾಯಿತು.
ವಿಲ್ ಜಾಕ್ಸ್-ರಜತ್ ಪಾಟಿದಾರ್ ಜತೆಗೂಡಿದ ಬಳಿಕ ಆರ್ಸಿಬಿ ಬ್ಯಾಟಿಂಗ್ ಬಿರುಸು ಪಡೆಯಿತು. ಓವರಿಗೆ ಹನ್ನೊಂದರಂತೆ ರನ್ ಹರಿದು ಬಂತು. ಜತೆಗೆ ಡೆಲ್ಲಿ ಫೀಲ್ಡಿಂಗ್ ಕೂಡ ಕಳಪೆ ಯಾಗಿತ್ತು. 10 ಓವರ್ ಅಂತ್ಯಕ್ಕೆ ಸ್ಕೋರ್ 110ಕ್ಕೆ ಏರಿತ್ತು. ಆರಂಭದಿಂದಲೇ ಮುನ್ನುಗ್ಗಿ ಬಾರಿಸತೊಡಗಿದ ರಜತ್ ಪಾಟಿದಾರ್ ಅರ್ಧ ಶತಕದೊಂದಿಗೆ ರಂಜಿಸಿದರು. ಪಾಟಿದಾರ್ ಗಳಿಕೆ 32 ಎಸೆತಗಳಿಂದ 52 ರನ್. ಸಿಡಿಸಿದ್ದು 3 ಫೋರ್ ಹಾಗೂ 3 ಸಿಕ್ಸರ್. ಇದು ಕಳೆದ 7 ಇನ್ನಿಂಗ್ಸ್ಗಳಲ್ಲಿ ಪಾಟಿದಾರ್ ಹೊಡೆದ 5ನೇ ಅರ್ಧ ಶತಕ. ಪಾಟಿದಾರ್-ಜಾಕ್ಸ್ 3ನೇ ವಿಕೆಟಿಗೆ 53 ಎಸೆತಗಳಿಂದ 88 ರನ್ ಪೇರಿಸಿ ದೊಡ್ಡ ಮೊತ್ತದ ಸೂಚನೆ ನೀಡಿದರು.
ಇಂಗ್ಲೆಂಡ್ನ ಸ್ಫೋಟಕ ಬ್ಯಾಟರ್ ವಿಲ್ ಜಾಕ್ಸ್ 29 ಎಸೆತ ಎದುರಿಸಿ 41 ರನ್ ಕೊಡುಗೆ ಸಲ್ಲಿಸಿದರು. ಸಿಡಿಸಿದ್ದು 3 ಬೌಂಡರಿ ಹಾಗೂ 2 ಸಿಕ್ಸರ್. 15 ಓವರ್ ಮುಕ್ತಾಯಕ್ಕೆ ಆರ್ಸಿಬಿ 4 ವಿಕೆಟಿಗೆ 138 ರನ್ ಮಾಡಿತ್ತು.
ಡೆತ್ ಓವರ್ ವೇಳೆ ಕ್ಯಾಮರಾನ್ ಗ್ರೀನ್-ಮಹಿಪಾಲ್ ಲೊನ್ರೋರ್ ಕ್ರೀಸ್ನಲ್ಲಿದ್ದರು. ಆದರೆ ಕೊನೆಯ 5 ಓವರ್ಗಳಲ್ಲಿ ಪಟಪಟನೆ ವಿಕೆಟ್ ಕಳೆದುಕೊಂಡ ಕಾರಣ ಆರ್ಸಿಬಿಯ ದೊಡ್ಡ ಮೊತ್ತದ ಯೋಜನೆ ತಲೆ ಕೆಳಗಾಯಿತು. ಲೊನ್ರೋರ್ (13) ಹೆಚ್ಚು ಹೊತ್ತು ನಿಲ್ಲಲಿಲ್ಲ. ಲೊನ್ರೋರ್ ಮತ್ತು ದಿನೇಶ್ ಕಾರ್ತಿಕ್ (0) ಅವರನ್ನು ಒಂದೇ ಓವರ್ನಲ್ಲಿ ಔಟ್ ಮಾಡಿದ ಖಲೀಲ್ ಅಹ್ಮದ್ ಡೆಲ್ಲಿ ಪಾಳೆಯದಲ್ಲಿ ಹರ್ಷ ಮೂಡಿಸಿದರು. ಕಾರ್ತಿಕ್ ಐಪಿಎಲ್ನಲ್ಲಿ ಅತ್ಯಧಿಕ 18 ಸೊನ್ನೆ ಸುತ್ತಿನ ದಾಖಲೆ ಬರೆದರು!.