ಮುಂಬೈ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿ ಹಲವು ಮಹತ್ವದ ಬೆಳವಣಿಗೆ ಸಾಕ್ಷಿಯಾಗಲಿದೆ. ದಿಗ್ಗಜ ಆಟಗಾರರು ಹರಾಜಿನಲ್ಲಿ ಇರಲಿದ್ದು, ಯಾವ ತಂಡವನ್ನ ಯಾರು ಪ್ರತಿನಿಧಿಸುತ್ತಾರೆ ಎಂಬುದರತ್ತ ಎಲ್ಲರ ಚಿತ್ತವಿದೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದಲೂ ಲೆಜೆಂಡ್ ಎಂ.ಎಸ್ ಧೋನಿ (MS Dhoni) ಅವರ ನಿವೃತ್ತಿಯ ಸುದ್ದಿ ಸದ್ದು ಮಾಡುತ್ತಲೇ ಇದೆ. ನಿರೀಕ್ಷೆಯಂತೆ 2024ರ ಐಪಿಎಲ್ ಟೂರ್ನಿಯಲ್ಲಿ ಸಿಎಸ್ಕೆ ಪರ ನಾಯಕತ್ವ ಬಿಟ್ಟು ಆಡಿದ ಧೋನಿ, ಇದೀಗ 2025ರ ಆವೃತ್ತಿಯಲ್ಲೂ ಚೈನ್ನೈ ಸೂಪರ್ ಕಿಂಗ್ಸ್ (CSK) ತಂಡದಲ್ಲಿ ಆಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಅಧಿಕೃತ ಮಾಹಿತಿಗಳು ಹೊರಬಂದಿಲ್ಲ. ಮುಂದೆ ಬಿಸಿಸಿಐ ನಿರ್ಧರಿಸುವ ರಿಟೇನರ್ಶಿಪ್ ನಿಯಮದ ಮೇಲೆ ನಿರ್ಧಾರವಾಗಲಿದೆ ಎಂದು ಹೇಳಲಾಗಿದೆ.
ಹೌದು. 2025ರ ಐಪಿಎಲ್ ಆವೃತ್ತಿಗಾಗಿ ಪ್ರಸಕ್ತ ವರ್ಷದಲ್ಲೇ ನಡೆಯಲಿರುವ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಕುರಿತು ನಿರ್ಧಾರ ಕೈಗೊಳ್ಳಲಿದೆ. ಬಿಸಿಸಿಐ (BCCI) ಶೀಘ್ರದಲ್ಲೇ ಮುಂಬೈನಲ್ಲಿರುವ ತನ್ನ ಪ್ರಧಾನ ಕಚೇರಿಯಲ್ಲಿ ಐಪಿಎಲ್ ಫ್ರಾಂಚೈಸಿ ಮಾಲೀಕರೊಟ್ಟಿಗೆ ಸಭೆ ನಡೆಸಲಿದೆ. ಪ್ರತೀ ತಂಡವು ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬುದನ್ನು ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಸದ್ಯದ ಬಿಸಿಸಿಐ ನಿಯಮದ ಪ್ರಕಾರ ಒಂದು ಫ್ರಾಂಚೈಸಿ 4 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು. ಆದ್ರೆ ಫ್ರಾಂಚೈಸಿಗಳು 8 ಆಟಗಾರರಿಗೆ ಬೇಡಿಕೆಯಿಟ್ಟಿವೆ ಒಂದು ವೇಳೆ ಬಿಸಿಸಿಐ 8 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಅವಕಾಶ ನೀಡಿದ್ರೆ, ಮಹಿ ಸಿಎಸ್ಕೆನಲ್ಲೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.