ನವದೆಹಲಿ: ದೇಶೀಯ ಹಾಗೂ ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತದಲ್ಲಿ (India) ಆಪಲ್ ಐಫೋನ್ಗಳನ್ನು (Apple iPhones) ತಯಾರಿಸಲು ಟಾಟಾ ಗ್ರೂಪ್ ಆರಂಭಿಸಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ತಿಳಿಸಿದ್ದಾರೆ.
ಆಪಲ್ನ ಪ್ರಮುಖ ಪೂರೈಕೆದಾರ ಕಂಪನಿ ವಿಸ್ಟ್ರಾನ್ ಕಾರ್ಪೊರೇಷನ್ ಖರೀದಿ ಕುರಿತಂತೆ ಆಡಳಿತ ಮಂಡಳಿ ಸಭೆ ನಡೆಸಿದ್ದು, ಅದರ ನಿರ್ಣಯದ ಪ್ರತಿಯನ್ನು ಸಚಿವರು ಹಂಚಿಕೊಂಡಿದ್ದಾರೆ
ಈ ಕುರಿತು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ PLI ಯೋಜನೆಯು ಈಗಾಗಲೇ ಭಾರತವನ್ನು ಸ್ಮಾರ್ಟ್ಫೋನ್ ತಯಾರಿಕೆ ಮತ್ತು ರಫ್ತಿಗೆ ಅತ್ಯಂತ ವಿಶ್ವಾಸಾರ್ಹ ಕೇಂದ್ರವಾಗಿ ಮಾರ್ಪಟ್ಟಿದೆ. ಇನ್ನು ಕೇವಲ ಎರಡುವರೆ ವರ್ಷಗಳೊಳಗೆ ಟಾಟಾ ಕಂಪನಿಯು ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಭಾರತದಿಂದ ಐಫೋನ್ಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ ಎಂದು ತಿಳಿಸಿದ್ದಾರೆ.
ವಿಸ್ಟ್ರಾನ್ ಕಾರ್ಯಾಚರಣೆಯನ್ನು ವಹಿಸಿಕೊಂಡಿರುವ ಟಾಟಾ ತಂಡಕ್ಕೆ ಹಾರ್ದಿಕ ಅಭಿನಂದನೆಗಳು. ಅದ್ಭುತ ಕೊಡುಗೆಗಳನ್ನು ನೀಡಿರುವ ವಿಸ್ಟ್ರಾನ್ ತಂಡಕ್ಕೆ ಧನ್ಯವಾದಗಳು. ಆಪಲ್ ಸಂಸ್ಥೆಯು ತನ್ನ ಚುಕ್ಕಾಣಿಯಲ್ಲಿರುವ ಭಾರತೀಯ ಕಂಪನಿಗಳೊಂದಿಗೆ ಭಾರತದಿಂದ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸಲು ಉತ್ತಮವಾಗಿದೆ. ಭಾರತ ಸರ್ಕಾರದ ಎಲೆಕ್ಟ್ರಾನಿಕ್ ಮತ್ತು ತಂತ್ರಜ್ಞಾನ ಸಚಿವಾಲಯವು ಗ್ಲೋಬಲ್ ಇಂಡಿಯನ್ ಎಲೆಕ್ಟ್ರಾನಿಕ್ಸ್ ಕಂಪನಿಗಳ ಬೆಳವಣಿಗೆಗೆ ಸಂಪೂರ್ಣ ಬೆಂಬಲವಾಗಿ ನಿಂತಿದ್ದು, ಅದು ಭಾರತವನ್ನು ತಮ್ಮ ವಿಶ್ವಾಸಾರ್ಹ ಉತ್ಪಾದನೆ ಮತ್ತು ಪ್ರತಿಭಾನ್ವಿತ ಪಾಲುದಾರನನ್ನಾಗಿ ಮಾಡಲು ಹಾಗೂ ಭಾರತವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಶಕ್ತಿಯನ್ನಾಗಿ ಮಾಡುವ ಪ್ರಧಾನಮಂತ್ರಿಗಳ ಗುರಿಯನ್ನು ಸಾಧಿಸಲು ಬಯಸುವ ಜಾಗತಿಕ ಎಲೆಕ್ಟ್ರಾನಿಕ್ ಬ್ರ್ಯಾಂಡ್ಗಳನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ