ಹುಬ್ಬಳ್ಳಿ: ವಿಕಲಚೇತನರನ್ನು ಸಮಾಜದಲ್ಲಿ ಗುರುತಿಸುವ ಕೆಲಸಗಳಾಗಬೇಕು. ಒಳ್ಳೆಯ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಮಜೇಥಿಯಾ ಫೌಂಡೇಶನ್ ಸಂಸ್ಥಾಪಕರಾದ ಜಿತೇಂದ್ರ ಮಜೇಥಿಯಾ ಹೇಳಿದರು. ಇಂದು ಇಂದಿರಾ ಗಾಜಿನ ಮನೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಧಾರವಾಡ,
ಅದಮ್ಯ ಚೇತನ ಫೌಂಡೇಶನ್, ಮಜೇಥೀಯಾ ಫೌಂಡೇಶನ್, ಹುಬ್ಬಳ್ಳಿ “ಸಕ್ಷಮ” ಕರ್ನಾಟಕ ಉತ್ತರ ಪ್ರಾಂತ, ಆಶಾಕಿರಣ ಕಿಮ್ಸ್ ಹುಬ್ಬಳ್ಳಿ, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜಿಲ್ಲೆಯ ಸ್ವಯಂ ಸೇವಾ ಶಿಕ್ಷಣ ಸಂಸ್ಥೆಗಳು ಮತ್ತು ವಿಕಲಚೇತನರ ಸಂಘ ಸಂಸ್ಥೆಗಳು, ವಿ.ಆರ್.ಡಬ್ಲೂ, ಯು.ಆರ್.ಡಬ್ಲೂ. ಎಮ್.ಆರ್.ಡಬ್ಲೂ, ಧಾರವಾಡ ಇವುಗಳ ಸಂಯುಕ್ತಾಶ್ರಯದಲ್ಲಿ “ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ” ವಿಶ್ವ ಸಂಸ್ಥೆಯ ಘೋಷವಾಕ್ಯದಡಿಯಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Free Gas Scheme: ಈ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ LPG ಗ್ಯಾಸ್..! ಇಂದೇ ಅರ್ಜಿ ಸಲ್ಲಿಸಿ
ನಮ್ಮ ಫೌಂಡೇಶನ್ ವತಿಯಿಂದ ವಿಶೇಷಚೇತನರಿಗೆ ಕೃತಕ ಅಂಗಾಂಗ ಜೋಡಣೆ ಸಲಕರಣೆಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಕೆಲಸ ಕಾರ್ಯಗಳನ್ನು ಮಾಡುವವರಿಗೆ ಪ್ರೋತ್ಸಾಹ ಒದಗಿಸಬೇಕಾಗಿದೆ ಎಂದರು.
ಐ.ಕೆ. ಲಕ್ಕುಂಡಿ ಮಾತನಾಡಿ, ಅಂಗವಿಕಲರ ಭವನ ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕೌಶಲ್ಯ ಕೇಂದ್ರ ತೆರೆಯಬೇಕು. ಸರ್ಕಾರದಿಂದ ವಿಶೇಷಚೇತನರಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಬೇಕಿದೆ. ಅಲ್ಲದೇ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ತರಬೇತಿ ನೀಡುವ ಕಾರ್ಯಗಳಾಗಬೇಕು. ವಿಶೇಷಚೇತನರಿಗೆ ಹೆಚ್ಚಿನ ಸಾಲ ಸೌಲಭ್ಯ ದೊರೆಯಬೇಕು. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ವಿಕಲಚೇತನರ ದಿನಾಚರಣೆ ಆಚರಣೆ ಮಾಡಬೇಕು. ಸರ್ಕಾರ ಸಂಗೀತ ಶಾಲೆ ತೆರೆಯಲು ಮುಂದಾಗಬೇಕಿದೆ ಎಂದು ಅವರು ಒತ್ತಾಯಿಸಿದರು.
ವಕೀಲರಾದ ಎಸ್.ಎಸ್.ಪಾಟೀಲ ಮಾತನಾಡಿ, ವಿಕಲಚೇತನರಿಗೆ ಸರ್ಕಾರದ ವತಿಯಿಂದ ಹಲವಾರು ಯೋಜನೆಗಳಿವೆ. ಸರ್ಕಾರವು ವಕೀಲರನ್ನು ನೇಮಿಸಿ ಉಚಿತವಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುತ್ತದೆ. ಹೀಗಾಗಿ ಯಾರೂ ಕೂಡ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.
ಸೆಲ್ಕೋ ಕಂಪನಿಯ ಮ್ಯಾನೇಜರ್ ರಾಜೇಂದ್ರ ಮಾತನಾಡಿ, ವಿಕಲಚೇತನರಿಗೆ ಸೋಲಾರ್ ಉಪಕರಣಗಳಿಗಾಗಿ ಶೇ.50 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಸರ್ಕಾರದ ಹಲವಾರು ಯೋಜನೆಗಳಿವೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಹಕರಿಗೆ ಯಾವ ರೀತಿಯಲ್ಲಿ ಯಂತ್ರೋಪಕರಣಗಳು ಬೇಕೋ ಹಾಗೆಯೇ ಯಂತ್ರೋಪಕರಣಗಳನ್ನು ಸಿದ್ದಪಡಿಸಿ ನೀಡಲಾಗುವುದು ಎಂದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಜಗದೀಶ ಕೆ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷಚೇತನರಲ್ಲಿನ ನಾಯಕತ್ವ ಗುಣವನ್ನು ಗುರುತಿಸುವ ನಿಟ್ಟಿನಲ್ಲಿ ಈ ದಿನವನ್ನು ಪ್ರತಿ ವರ್ಷ ಆಚರಣೆ ಮಾಡಲಾಗುವುದು. ಸಮಾಜದಲ್ಲಿ ಅವರನ್ನು ಗುರುತಿಸುವ ಕೆಲಸಗಳಾಗಬೇಕು. ಅವರಿಗೆ ಸಿಗುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ.ಹೆಚ್.ಹೆಚ್.ಕುಕನೂರ ಅಧ್ಯಕ್ಷತೆ ವಹಿಸಿದ್ದರು.
ನೋಡುಗರ ಗಮನ ಸೆಳೆದ ಸಾಮರಸ್ಯ ಸಾರುವ ನೃತ್ಯಗಳು
ವಿಶೇಷಚೇತನ ವಿದ್ಯಾರ್ಥಿಗಳು ತಮ್ಮ ನೃತ್ಯಗಳ ಮೂಲಕ ನೋಡುಗರ ಗಮನ ಸೆಳೆದರು. ಆಂಜನೇಯನ ಮಹಿಮೆ, ವಿಘ್ನ ವಿನಾಯಕನ ಮಹಿಮೆ, ಕ್ರೀಡಾ ಮನೋಭಾವ, ಚನ್ನಪ್ಪ ಚನ್ನಗೌಡ ಸೇರಿದಂತೆ ವಿವಿಧ ಸಾಮರಸ್ಯ ಸಾರುವ ನೃತ್ಯಗಳು ನೋಡುಗರಿಂದ ಮೆಚ್ಚುಗೆ ಪಡೆದುಕೊಂಡವು. ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ್ ಮತ್ತು ಮಜಾ ಭಾರತ ಖ್ಯಾತಿಯ ಬಸವರಾಜ ಗುಡ್ಡಪ್ಪನವರ ಅವರ ಹಾಸ್ಯ ಕಾರ್ಯಕ್ರಮ ಮನರಂಜನೆ ನೀಡಿತು.
ಕಲಾವತಿ ಹೊಸೂರ, ಲಕ್ಷ್ಮಿ ಮೇಟಿ, ಬಸಪ್ಪ ಹೆಬಸೂರು, ದೇವಪ್ಪ ಮೊರೆ, ಮೊಹಮ್ಮದ್ ಹುಲ್ಬನಿ, ಯಲ್ಲಪ್ಪ ಸುಳ್ಳದ, ಆತ್ಮಾನಂದ ಅಕ್ಕಿ, ಗೀತಾ ನಾಯ್ಕ, ವಿದ್ಯಾ ಬಾಕಳೆ, ಸುರೇಖಾ ಪಾಟೀಲ, ಇನ್ಸಲೀಮ ಸೊಲ್ಲಾಪುರ, ನೀಲಮ್ಮ ಧಾರವಾಡ, ಕಲ್ಪನ ತಿಪ್ಪಕ್ಕನವರ, ಸೀಮಾ ಗೋಂದಕರ, ನಾಗಪ್ಪ ಹಿರೇಮೊರಬ ಸೇರಿದಂತೆ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಇಕ್ವಿಪ್ ಇಂಡಿಯಾದ ವಿಜಯ, ಡಿ.ಡಿ. ಮೇಚಣ್ಣವರ, ತಾರಾ ಫರ್ನಾಂಡೀಸ್, ರಾಜಕುಮಾರ, ಕವಿತಾ ಮೇಗೂರು, ವಿಜಯ ಹಿರೇಮಠ, ಅಶೋಕ ಜೋಶಿ, ಜೆ.ಕೆ.ಪಾಸ್ತೆ, ಪಿ.ವಿ.ದತ್ತಿ, ರೇಖಾ, ಎಂ.ಆರ್.ಡಬ್ಲ್ಯೂ ಚನ್ನಮ್ಮ, ಎಂ.ಆರ್.ಜಿ. ರೇಣುಕಾ, ಮಹಾಂತೇಶ ಕುರ್ತಕೋಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಸಾರ್ವಜನಿರು ಇತರರು ಉಪಸ್ಥಿತರಿದ್ದರು. ಹುಬ್ಬಳ್ಳಿಯ ಅಂಧ ಬಾಲಕರ ಸರ್ಕಾರಿ ಪಾಠಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತ ಪಡಿಸಿ, ಪ್ರಾರ್ಥಿಸಿದರು. ಹುಬ್ಬಳ್ಳಿಯ ಅಂಧ ಬಾಲಕರ ಸರ್ಕಾರಿ ಪಾಠಶಾಲೆಯ ಪದವಿಪೂರ್ವ ಶಿಕ್ಷಕರಾದ ಅಣ್ಣಪ್ಪ ಕೋಳಿ ನಿರೂಪಿಸಿ ವಂದಿಸಿದರು.