ಬೆಂಗಳೂರು: ಜೂನ್ 13 ರಂದು ವಿಧಾನಸಭೆಯಿಂದ ವಿಧಾನ ಪರಿಷತ್ ನ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಟಿಕೆಟ್ ಆಕಾಂಕ್ಷಿಗಳ ಲಾಬಿ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತೆಗೆದುಕೊಂಡು ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಲಿದ್ದಾರೆ.
ಸಂಖ್ಯಾಬಲದ ಆಧಾರದಲ್ಲಿ ಕಾಂಗ್ರೆಸ್ಗೆ ಪರಿಷತ್ನಲ್ಲಿ 7 ಸ್ಥಾನ ಲಭಿಸಲಿದೆ. ಆದರೆ ಈ ಏಳು ಸ್ಥಾನಕ್ಕಾಗಿ 60ಕ್ಕೂ ಅಧಿಕ ಆಕಾಂಕ್ಷಿಗಳು ತೀವ್ರ ಲಾಬಿ ನಡೆಸುತ್ತಿದ್ದಾರೆ. ಒಂದೆಡೆ ಮಂತ್ರಿಗಳ ಮೂಲಕ ಲಾಬಿ ನಡೆಸುತ್ತಿದ್ದರೆ, ಇನ್ನೊಂದೆಡೆ ಡಿಸಿಎಂ, ಸಿಎಂ ಮೂಲಕವೂ ಒತ್ತಡ ಹೇರುತ್ತಿದ್ದಾರೆ. ಸಮುದಾಯವಾರು, ಜಾತಿವಾರು, ಅಲ್ಪಸಂಖ್ಯಾತರಿಗೆ ಅವಕಾಶ ನೀಡುವಂತೆ ಸಿಎಂ ಹಾಗೂ ಡಿಸಿಎಂ ಬಳಿ ಒತ್ತಡ ಹೇರಲಾಗುತ್ತಿದೆ.
ವಾಟ್ಸಾಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕೋದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ
ಕಲ್ಯಾಣ ಕರ್ನಾಟಕ ಸಚಿವರ ನಿಯೋಗ, ಅಲ್ಪಸಂಖ್ಯಾತ ಕಾಂಗ್ರೆಸ್ ನಾಯಕರ ನಿಯೋಗ ಈಗಾಗಲೇ ಡಿಸಿಎಂರನ್ನು ಭೇಟಿಯಾಗಿ ತಮ್ಮ ಅಭ್ಯರ್ಥಿಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಇತ್ತ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ನಾಯಕರು, ಮೂಲ ಕಾಂಗ್ರೆಸಿಗರು ಎಂಎಲ್ಸಿ ಸ್ಥಾನ ನೀಡುವಂತೆ ಒತ್ತಡ ಹೇರುತ್ತಿದ್ದಾರೆ.
ಇನ್ನೊಂದೆಡೆ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಅವಕಾಶ ನೀಡಿದರೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಒತ್ತಾಯವೂ ಇದೆ. ಹೀಗಾಗಿ ಕಾಂಗ್ರೆಸ್ಗೆ ಲಭಿಸಲಿರುವ ಏಳು ಎಂಎಲ್ಸಿ ಸ್ಥಾನಗಳಿಗೆ ಕೈ ಪಾಳಯದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಆಕಾಂಕ್ಷಿಗಳ ಪಟ್ಟಿ ಸಿಎಂ ಹಾಗೂ ಡಿಸಿಎಂ ಮುಂದಿದ್ದು, ಈ ಬಗ್ಗೆ ಅಂತಿಮ ನಿರ್ಧಾರವನ್ನು ಹೈಕಮಾಂಡ್ಗೆ ಬಿಡಲಾಗಿದೆ.