ತೆಲುಗು ರಿಯಾಲಿಟಿ ಶೋನಲ್ಲಿ ಕನ್ನಡಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿರೂಪಕಿ ಸೌಮ್ಯ ರಾವ್ ಸ್ಪಷ್ಟನೆ ನೀಡಿದ್ದಾರೆ.
ಹೊಸ ವರ್ಷದ ಆಚರಣೆಗೆ ತೆಲುಗು ವಾಹಿನಿ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟಿತ್ತು. ಇದರಲ್ಲಿ ನಿರೂಪಕಿ ಸುಮಾ, ಹೈಪರ್ ಆದಿ, ನೂಕರಾಜು, ಕನ್ನಡ ಮೂಲದ ಸೌಮ್ಯ ರಾವ್, ಬ್ರಹ್ಮಾಜಿ, ನಟ ರಾಜೀವ್ ಕನಕಾಲ, ರಾಂಪ್ರಸಾದ್ ಮುಂತಾದ ಹಾಸ್ಯನಟರು ಮತ್ತು ಕಿರುತೆರೆ ತಾರೆಯರೊಂದಿಗೆ ‘ದಾವತ್’ ಎಂಬ ಕಾರ್ಯಕ್ರಮವನ್ನು ಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಪ್ರೋಮೋ ಇತ್ತೀಚೆಗೆ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ನಟಿ ಹಾಗೂ ಕರ್ನಾಟಕ ಮೂಲದ ಸೌಮ್ಯ ರಾವ್ ಜಬರ್ದಸ್ತ್ ಕಾರ್ಯಕ್ರಮ, ಶ್ರೀದೇವಿ ಡ್ರಾಮಾ ಕಂಪನಿ ಕಾರ್ಯಕ್ರಮದ ಮೂಲಕ ತೆಲುಗಿನಲ್ಲೂ ಜನಪ್ರಿಯರಾಗಿದ್ದಾರೆ.
ನಿರೂಪಕಿ ರಶ್ಮಿ ಅವರಂತೆಯೇ ಇವರಿಗೂ ತೆಲುಗು ಸರಿಯಾಗಿ ಬರುವುದಿಲ್ಲ. ಆದರೆ ಹೇಗೋ ಮ್ಯಾನೇಜ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಅವರು ಮಾತನಾಡುವ ತೆಲುಗು ಪದ ಎರಡು ಅರ್ಥ ಬರುವಂತೆ, ಅಸಭ್ಯವಾಗಿ ಭಾಸವಾಗುತ್ತದೆ. ಇದರಿಂದಾಗಿ ಸೌಮ್ಯ ರಾವ್ ಟ್ರೋಲ್ ಆಗುತ್ತಿರುತ್ತಾರೆ.
ಇದೇ ವಿಚಾರವಾಗಿ ‘ದಾವತ್’ ಪ್ರೋಮೋದಲ್ಲಿ ನೂಕರಾಜು ಅವರು ಸೌಮ್ಯ ರಾವ್ ಅವರನ್ನು ನೇರವಾಗಿ ಟೀಕಿಸಿದ್ದು, ತೆಲುಗು ಸರಿಯಾಗಿ ಮಾತನಾಡಲು ಬಾರದವರು ಯಾಕೆ ನಿರೂಪಣೆ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಸೌಮ್ಯ ರಾವ್ ಕೂಡ ನೂಕರಾಜುಗೆ ತಿರುಗೇಟು ನೀಡಿದ್ದಾರೆ. ನನ್ನ ಮಾತೃಭಾಷೆ ಕನ್ನಡ. ಅಲ್ಲಿಂದ ಇಲ್ಲಿಗೆ ಬಂದು ಹೀಗೆ ನಿರೂಪಣೆ ಮಾಡಲು ಸಾಧ್ಯವಾಗುತ್ತಿದೆ. ಸ್ವಲ್ಪ ತೆಲುಗು ಮಾತನಾಡಲು ಸಾಧ್ಯವಾಗುತ್ತಿದೆ ಎಂದರೆ ಅದು ತುಂಬಾ ದೊಡ್ಡ ವಿಷಯ ಎಂದು ಸೌಮ್ಯ ರಾವ್ ಹೇಳಿದ್ದಾರೆ.
ಈ ವೇಳೆ ಹಾಸ್ಯ ನಟ ನೂಕರಾಜು ನೀವು 10 ಮಾತುಗಳನ್ನು ಆಡಿದರೆ ಅದರಲ್ಲಿ 8 ಬೈಗುಳುಗಳೇ ಇರುತ್ತವೆ ಎಂದು ಟೀಕಿಸಿದ್ದಾರೆ. ಈ ಘಟನೆಯಿಂದ ಕನ್ನಡತಿ ಸೌಮ್ಯ ರಾವ್ಗೆ ಕೋಪ ಬಂದಿದೆ. ನೀವು ಕನ್ನಡ ಚಿತ್ರರಂಗಕ್ಕೆ ಹೋಗಿ ಕನ್ನಡ ಕಲಿತು ನನ್ನಂತೆ ನಿರೂಪಣೆ ಮಾಡಬಲ್ಲಿರಾ? ಎಂದು ಪ್ರಶ್ನಿಸಿದ್ದಾರೆ. ನನಗೆ ಬೇರೆ ಭಾಷೆ ಬರದಿದ್ದರೆ ಅಲ್ಲಿಗೆ ಹೋಗುವುದಿಲ್ಲ ಎಂದು ನೂಕರಾಜು ಉತ್ತರಿಸಿದ್ದಾರೆ. ಭಾಷೆ ಬಾರದಿದ್ದರೆ ಅದರಲ್ಲಿ ನಿರೂಪಣೆ ಮಾಡಬಾರದು ಎಂಬುದು ನೂಕರಾಜು ಪುನಃ ವಾದ ಮಾಡಿದ್ದು, ಹಾಗಿದ್ದಲ್ಲಿ ನನ್ನನ್ನು ಕಾರ್ಯಕ್ರಮಕ್ಕೆ ಕರೆಯಬೇಡಿ, ತೆಲುಗು ಜನರನ್ನೇ ಕರೆದುಕೊಳ್ಳಿ ಎಂದು ಸೌಮ್ಯ ರಾವ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಹೈಪರ್ ಆದಿ ಕೂಡ ಯಾವುದೋ ವಿಷಯದಲ್ಲಿ ಜಗಳವಾಡಿ ಸವಾಲು ಹಾಕಿದ್ದಾರೆ. ಅದನ್ನು ಸಾಬೀತುಪಡಿಸಿದರೆ ತಾನು ಈಟಿವಿ ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದಾರೆ. ಅರಿಯಾನಾ ಮತ್ತು ಇಮ್ಯಾನುಯೆಲ್ ನಡುವೆಯೂ ವಿವಾದ ಭುಗಿಲೆದ್ದಿದೆ. ತನ್ನ ಮೇಲೆ ಕೆಟ್ಟ ಜೋಕ್ಗಳನ್ನು ಹೇಳಬೇಡಿ ಎಂದು ಅರಿಯಾನಾ ಇಮ್ಯಾನುಯೆಲ್ಗೆ ಎಚ್ಚರಿಕೆ ನೀಡಿದ್ದಾರೆ.
ಇವರಿಬ್ಬರ ನಡುವೆ ನಿಜವಾಗಿಯೂ ಏನಾಯಿತು ಎಂಬುದು ಡಿಸೆಂಬರ್ 31 ರಂದು ತಿಳಿಯಲಿದ್ದು, ಕಾರ್ಯಕ್ರಮ ಡಿಸೆಂಬರ್ 31ರಂದು ಪ್ರಸಾರವಾಗಲಿದೆ.
ಇನ್ನು ಈ ಕಾರ್ಯಕ್ರಮದ ಕುರಿತು ಕರ್ನಾಟಕದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಕನ್ನಡತಿ ಮತ್ತು ಕನ್ನಡಕ್ಕೆ ತೆಲುಗಿನಲ್ಲಿ ಅಪಮಾನ ಮಾಡಲಾಗುತ್ತಿದೆ ಎಂದು ವ್ಯಾಪಕ ಟ್ರೋಲ್ ಮಾಡಲಾಗುತ್ತಿದೆ. ಇದೀಗ ಇದೇ ವಿಚಾರವಾಗಿ ನಟಿ ಸೌಮ್ಯರಾವ್ ಸ್ಪಷ್ಟನೆ ನೀಡಿದ್ದು, ಆ ಶೋನಲ್ಲಿ ಯಾವುದೇ ರೀತಿಯಲ್ಲೂ ಕನ್ನಡಕ್ಕೆ ಅಪಮಾನವಾಗಿಲ್ಲ. ಸಂಪೂರ್ಣ ವಿಡಿಯೋ ಅಥವಾ ಕಾರ್ಯಕ್ರಮ ಡಿಸೆಂಬರ್ 31ರಂದು ಪ್ರಸಾರವಾಗುತ್ತದೆ. ಸಂಪೂರ್ಣ ಕಾರ್ಯಕ್ರಮ ನೋಡಿದರೆ ಅರ್ಥವಾಗುತ್ತದೆ. ಅಲ್ಲದೆ ನಟ ನೂಕರಾಜು ಕೂಡ ಕನ್ನಡವನ್ನು ಪ್ರೀತಿಸುತ್ತಾರೆ ಎಂದು ನಟಿ ಸೌಮ್ಯರಾವ್ ಹೇಳಿದ್ದಾರೆ. ಬಳಿಕ ನಟ ನೂಕರಾಜು ಕೂಡ ಜೈ ಕರ್ನಾಟಕ ಎನ್ನುವ ಮೂಲಕ ಯಾವುದೇ ವಿವಾದವಿಲ್ಲ ಎಂದು ಹೇಳಿದ್ದಾರೆ.