ಭತ್ತದ ಕಣಜವೆಂದೇ ಬಿಂಬಿಸಲ್ಪಟ್ಟಿದ್ದ ಜಿಲ್ಲೆಯ ಕೃಷಿ ವಲಯವು ದಿನ ಕಳೆದಂತೆ ಬದಲಾಗುತ್ತಿದ್ದು, ಕಬ್ಬು, ಭತ್ತ, ತೆಂಗಿಗೆ ಇದ್ದ ಪ್ರಾಮುಖ್ಯತೆ ಕಡಿಮೆಯಾಗಿ ಈ ಪ್ರದೇಶವನ್ನು ಅಡಿಕೆ ಬೇಸಾಯ ಆವರಿಸುತ್ತಿದೆ
ಕರಾವಳಿ, ಮಲೆನಾಡು, ಅರೆ ಮಲೆನಾಡು ಪ್ರದೇಶಕ್ಕೆ ಸೀಮಿತವಾಗಿದ್ದ ಅಡಿಕೆ ಬೇಸಾಯ ಕೃಷಿ ಪ್ರಧಾನ ಮಂಡ್ಯ ಜಿಲ್ಲೆಗೂ ಕಾಲಿಟ್ಟಿದೆ. ಕೃಷಿ ಕಾರ್ಮಿಕರ ಕೊರತೆ, ನಗರ ಪ್ರದೇಶಗಳತ್ತ ಗುಳೆ ಹೊರಟ ಯುವಕರು ಮತ್ತು ನಿರಂತರ ಬರ, ನೀರಿನ ಕೊರತೆ, ವಿಸಿ ನಾಲೆ ಸೇರಿದಂತೆ ಕೆರೆ ವ್ಯಾಪ್ತಿಯಲ್ಲಿ ಕಟ್ಟು ನೀರು ಪದ್ಧತಿ ಜಿಲ್ಲೆಯ ಕೃಷಿ ಪ್ರದೇಶದ ಬದಲಿ ಬೆಳೆ ಸ್ಥಿತಿಗೆ ಕಾರಣವೆನ್ನಲಾಗಿದೆ.
ಬಹುತೇಕ ರೈತರು ಈಗಾಗಲೇ ತೆಂಗಿನ ಬೇಸಾಯದೊಟ್ಟಿಗೆ ಮಿಶ್ರ ಬೆಳೆಯಾಗಿ ಅಡಿಕೆಗೆ ಒತ್ತು ನೀಡಿದ್ದಾರೆ. ಕೆಲ ರೈತರು ಕಬ್ಬು, ಭತ್ತ, ಮತ್ತು ತೋಟಗಾರಿಕೆ ಬೆಳೆಗಳನ್ನು ಕೈಬಿಟ್ಟು ಪೂರ್ಣ ಪ್ರಮಾಣದ ಅಡಿಕೆ ನಾಟಿಗೆ ಮುಂದಾಗಿದ್ದಾರೆ.
ಜಿಲ್ಲೆಯಲ್ಲಿ ಅಧಿಕವಾಗಿ ಕಾಣಸಿಗುವ ಅಡಿಕೆ ಬೆಳೆ ಬೇಸಾಯಕ್ಕೆ ಸರಕಾರ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಹನಿ ನೀರಾವರಿ, ವಿವಿಧ ರಿಯಾಯಿತಿಗಳು, ಪ್ರೋತ್ಸಾಹಧನ ಮತ್ತು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸೌಲಭ್ಯಗಳಿಲ್ಲ. ಈ ಹಿನ್ನೆಲೆಯಲ್ಲಿ ರೈತರು ತೋಟಗಾರಿಕೆ ಬೆಳೆಗಳಿಗೆ ಒತ್ತು ನೀಡಬೇಕು ಎಂಬುದು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ ಅವರ ಮನವಿ.
ಮಂಡ್ಯ ಜಿಲ್ಲೆಯಲ್ಲಿ4447 ಹೆಕ್ಟೇರ್ ಅಡಿಕೆ ಬೆಳೆಯಿದೆ. ಕೆಆರ್ ಪೇಟೆ ತಾಲೂಕಿನಲ್ಲಿ 2667 ಹೆಕ್ಟೇರ್, ಮದ್ದೂರು 204 ಹೆಕ್ಟೇರ್, ಮಳವಳ್ಳಿ 432 ಹೆಕ್ಟೇರ್, ಮಂಡ್ಯ 140 ಹೆಕ್ಟೇರ್, ನಾಗಮಂಗಲ 229 ಹೆಕ್ಟೇರ್, ಪಾಂಡವಪುರ 516 ಹೆಕ್ಟೇರ್, ಶ್ರೀರಂಗಪಟ್ಟಣ ತಾಲೂಕಿನಲ್ಲಿ 358 ಹೆಕ್ಟೇರ್ ಪ್ರದೇಶದಲ್ಲಿ ಸದ್ಯಕ್ಕೆ ಅಡಿಕೆ ಬೇಸಾಯ ಕಾಣಬಹುದಾಗಿದೆ.