ರಾಜ್ಕೋಟ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 3ನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಗೆದ್ದು ಬೀಗಿದ್ದ ಭಾರತ ತಂಡ 3ನೇ ಪಂದ್ಯ ಗೆಲ್ಲೋ ನಿರೀಕ್ಷೆಯಲ್ಲಿತ್ತು. ಇಂಗ್ಲೆಂಡ್ ನೀಡಿದ 172 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 145 ರನ್ ಗಳಿಸಿದೆ. ಈ ಮೂಲಕ 26 ರನ್ಗಳಿಂದ ಸೋತಿದೆ.
ಸೋಲಿನ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ಪಂದ್ಯದ ಸಂಪೂರ್ಣ ಕ್ರೆಡಿಟ್ ಎದುರಾಳಿ ಸ್ಪಿನ್ನರ್ ಆದಿಲ್ ರಶೀದ್ ಅವರಿಗೆ ನೀಡಿದರು. ನಾವು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದಾಗ, ದ್ವಿತೀಯ ಇನಿಂಗ್ಸ್ ವೇಳೆ ಇಬ್ಬನಿ ಇರಲಿದೆ ಎಂದು ಭಾವಿಸಿದ್ದೆವು. ಆದರೆ ನಮ್ಮ ನಿರೀಕ್ಷೆ ಹುಸಿಯಾಯಿತು.
ಎಷ್ಟೇ ನೀರು ಕುಡಿದರೂ ದಾಹ ನೀಗುತ್ತಿಲ್ಲವೆ..? ಬಾಯಾರಿಕೆ ಜಾಸ್ತಿ ಆಗೋಕೆ ಇದೇ ಕಾರಣ ಇರಬಹುದು
ಇದಾಗ್ಯೂ ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡುವಾಗ ನಾವು ಗೆಲ್ಲುವ ವಿಶ್ವಾಸವಿತ್ತು. ಆದರೆ ಈ ಹಂತದಲ್ಲಿ ಅದ್ಭುತ ಬೌಲಿಂಗ್ ಸಂಘಟಿಸುವಲ್ಲಿ ಆದಿಲ್ ರಶೀದ್ ಯಶಸ್ವಿಯಾದರು. ಇಂತಹ ಬೌಲಿಂಗ್ ಸಂಘಟಿಸುವುದರಿಂದಲೇ ಅವರು ವಿಶ್ವ ದರ್ಜೆಯ ಬೌಲರ್ ಆಗಿದ್ದಾರೆ. ಹೀಗಾಗಿ ಇಂಗ್ಲೆಂಡ್ ಗೆಲುವಿನ ಶ್ರೇಯಸ್ಸು ಆದಿಲ್ ರಶೀದ್ ಅವರಿಗೆ ಸೇರಬೇಕು ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
ಏಕೆಂದರೆ ಆದಿಲ್ ರಶೀದ್ ಯಾವುದೇ ಹಂತದಲ್ಲೂ ನಮಗೆ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಪರಿಣಾಮ ರನ್ಗಳಿಕೆಯನ್ನು ನಮ್ಮ ಬ್ಯಾಟರ್ಗಳು ಹಿಂದುಳಿದೆವು. ಈ ಸೋಲಿನ ಹೊರತಾಗಿಯೂ ನಾವು ಪ್ರತಿ ಪಂದ್ಯದಿಂದಲೂ ಏನಾದರೂ ಕಲಿಯುತ್ತೇವೆ. ಈ ಪಂದ್ಯದ ಮೂಲಕ ಬ್ಯಾಟಿಂಗ್ ಮತ್ತಷ್ಟು ಉತ್ತಮಗೊಳಿಸಬೇಕೆಂದನ್ನು ಅರಿತುಕೊಂಡಿದ್ದೇವೆ ಎಂದು ಟೀಮ್ ಇಂಡಿಯಾ ನಾಯಕ ಹೇಳಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಪಾಸಿಟಿವ್ ವಿಷಯ ಎಂದರೆ ವರುಣ್ ಚಕ್ರವರ್ತಿ ಅವರ ಪ್ರದರ್ಶನ. ಅವರು ಪ್ರತಿ ಪಂದ್ಯದಲ್ಲೂ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ. ಇದು ಮುಂದಿನ ಪಂದ್ಯದಲ್ಲೂ ಮುಂದುವರೆಯುವ ವಿಶ್ವಾಸವಿದೆ. ಹಾಗೆಯೇ ವರ್ಷಗಳ ಬಳಿಕ ಕಂಬ್ಯಾಕ್ ಮಾಡಿರುವ ಮೊಹಮ್ಮದ್ ಶಮಿ ಈ ಮ್ಯಾಚ್ನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ ಮುಂದೆ ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.