ಕೋವಿಡ್ -19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ್ದ ಸಹಾಯಕ್ಕಾಗಿ ಹಾಗೂ ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸಲು ಡೊಮಿನಿಕಾ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ‘ಡೊಮಿನಿಕಾ ಅವಾರ್ಡ್ ಆಫ್ ಆನರ್’ ಅನ್ನು ನೀಡಲು ಮುಂದಾಗಿದೆ.
ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತ ನೀಡಿದ ಬೆಂಬಲ, ನೆರವಿಗೆ ಕೃತಜ್ಞತೆಯ ಸಂಕೇತವಾಗಿ ಮತ್ತು ಉಭಯ ದೇಶಗಳ ನಡುವೆ ಬೆಳೆಯುತ್ತಿರುವ ಪಾಲುದಾರಿಕೆಯ ಸಂಕೇತವಾಗಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಡೊಮಿನಿಕಾದ ಪ್ರಧಾನ ಮಂತ್ರಿ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
2021ರ ಫೆಬ್ರವರಿಯಲ್ಲಿ COVID-19 ಉತ್ತುಂಗದಲ್ಲಿದ್ದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಡೊಮಿನಿಕಾಗೆ 70,000 ಡೋಸ್ ಅಸ್ಟ್ರಾಜೆನೆಕಾ ಲಸಿಕೆಯನ್ನು ಕಳುಹಿಸಿತ್ತು. ಈ ಲಸಿಕೆ ಪೂರೈಕೆಯನ್ನು ಭಾರತದ ‘ಲಸಿಕೆ ಮೈತ್ರಿ’ ನೀತಿಯ ಅಡಿಯಲ್ಲಿ ಮಾಡಿತ್ತು. ಈ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುವ ಗುರಿ ಭಾರತ ಹೊಂದಿತ್ತು.
ಮುಂಬರುವ ಭಾರತ-CARICOM (ಕೆರಿಬಿಯನ್ ಸಮುದಾಯ) ಶೃಂಗಸಭೆಯಲ್ಲಿ ಡೊಮಿನಿಕನ್ ಅಧ್ಯಕ್ಷ ಸಿಲ್ವಾನಿ ಬರ್ಟನ್ ಪ್ರಧಾನಿ ಮೋದಿಯವರಿಗೆ ‘ಡೊಮಿನಿಕಾ ಅವಾರ್ಡ್ ಆಫ್ ಆನರ್’ ಗೌರವವನ್ನು ನೀಡಲಿದ್ದಾರೆ. ಈ ಶೃಂಗಸಭೆಯು ಗಯಾನಾದ ಜಾರ್ಜ್ಟೌನ್ನಲ್ಲಿ ನವೆಂಬರ್ 19 ಮತ್ತು 21ರ ನಡುವೆ ನಡೆಯಲಿದೆ. ಈ ಸಂದರ್ಭದಲ್ಲಿ, ಭಾರತ ಮತ್ತು ಕೆರಿಬಿಯನ್ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಮಾತುಕತೆ ನಡೆಸಲಾಗುತ್ತದೆ.