ಬೆಂಗಳೂರು: ನಾರಾಯಣ ನೇತ್ರಾಲಯ, ಎಸ್ಎಚ್ ಜಿ ಟೆಕ್ನಾಲಜೀಸ್ ಸಹಯೋಗದಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಔರಾಮೆಂಟೆಡ್ ರಿಯಾಲಿಟಿ ಕಡಿಮೆ ದೃಷ್ಟಿ ಸಹಾಯಕ ಸಾಧನ “ಔರಾ ವಿಷನ್” ಅನ್ನು ಪರಿಚಯಿಸಿದೆ.
ಕಡಿಮೆ ದೃಷ್ಟಿ ಹೊಂದಿರುವ ವ್ಯಕ್ತಿಗಳಿಗೆ ಸುಲಭ ಹಾಗೂ ಸ್ವತಂತ್ರ ಜೀವನವನ್ನು ಸಾಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಸಾಧನವು ನವೀನ ಬಹು- ಕ್ಯಾಮೆರಾ ಸಂಯೋಜಿತ ವರ್ಧಿತ ರಿಯಾಲಿಟಿ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದು, ಓಡಾಡಲು, ಓದಲು, ಹತ್ತಿರ ಮತ್ತು ದೂರದ ವಸ್ತುಗಳನ್ನು ಗುರುತಿಸಲು ಸಹಾಯ ಮಾಡಲಿದೆ.
ಔರಾ ವಿಷನ್ ನಲ್ಲಿ ವಿವಿಧ ಹಂತದ ದೃಷ್ಟಿಹೀನತೆ ಹೊಂದಿರುವ ವ್ಯಕ್ತಿಗಳಿಗೆ ಸಹಾಯ ಮಾಡಲು ಸುಧಾರಿತ ಆಗ್ಲೆಂಟೆಡ್ ರಿಯಾಲಿಟಿ ತಂತ್ರಜ್ಞಾನವನ್ನು ಬಳಸಬಹುದಾಗಿದೆ. ವಿಶ್ವದ ಮೊದಲ ಕಡಿಮೆ ದೃಷ್ಟಿ ಸಹಾಯಕ ಸಾಧನವಾಗಿ ಬಹು- ರೆಸಲ್ಯೂಶನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೂಮ್ ಮೂಲಕ ವೀಕ್ಷಣೆ ಮಾಡಿ ಸುಲಭವಾಗಿ ಅಕ್ಷರಗಳನ್ನು ಓದಬಹುದಾಗಿದೆ.
ಸಾಮಾನ್ಯ ದೃಷ್ಟಿ ತೀಕ್ಷತೆಯನ್ನು 6/6 ಎಂದು ನಿಗದಿಪಡಿಸಲಾಗಿದೆ ಒಬ್ಬ ವ್ಯಕ್ತಿಯ ಸಾಮಾನ್ಯ ದೃಷ್ಟಿಯು 6 ಮೀಟರ್ ದೂರದಲ್ಲಿ ಸ್ಪಷ್ಟವಾಗಿ ಎಲ್ಲವನ್ನೂ ನೋಡಬಹುದು ಎನ್ನುವುದಾಗಿದೆ. ಕಡಿಮೆ ದೃಷ್ಟಿ ಎನ್ನುವುದು ಕಣ್ಣಿನಲ್ಲಿ ದೃಷ್ಟಿ ತೀಕ್ಷತೆಯನ್ನು 6/18 ರಿಂದ 3/60 ಕ್ಕಿಂತ ಕಡಿಮೆ ಎಂದು ನಿಗದಿಮಾಡಲಾಗಿದೆ. ಕಡಿಮೆ ದೃಷ್ಟಿಯ ಸ್ಥಿತಿಯನ್ನು ಕನ್ನಡಕ, ಕಾಂಟ್ಯಾಕ್ಟ್ ಲೆನ್ಸ್, ಔಷಧ ಅಥವಾ ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಲಾಗುವುದಿಲ್ಲ ಇದನ್ನು ಔರಾ ವಿಷನ್ ಬಳಕೆಯಿಂದ ಸರಿಪಡಿಸಬಹುದಾಗಿದೆ.
ಕಡಿಮೆ ದೃಷ್ಟಿ ವಯಸ್ಕರ ಮತ್ತು ಮಕ್ಕಳ ಮೇಲೆ ಪರಿಣಾಮ ಬೀರಬಹುದಾಗಿದೆ. ಅನುವಂಶಿಕತೆ, ಅಫಘಾತ ಅಥವಾ ಮ್ಯಾಕ್ಯುಲರ್ ಡಿಜೆನರೇಶನ್, ಡಯಾಬಿಟಿಕ್ ರೆಟಿನೋಪತಿ, ಗ್ಲುಕೋಮಾ ರೆಟಿನೈಟಿಸ್ ಪಿಗ್ಗೆಂಟೋಸಾ, ಅಕ್ಷಿಪಟಲದ ಬೇರ್ಪಡುವಿಕೆ, ಅಪ್ಟಿಕ್ ಕ್ಷೀಣತೆ ಮುಂತಾದ ಕಣ್ಣಿನ ಪರಿಸ್ಥಿತಿಯಿಂದ ದೃಷ್ಟಿ ಕಡಿಮೆಯಾಗುವ ಸಾಧ್ಯತೆ ಇದೆ. ಕಡಿಮೆ ದೃಷ್ಟಿ ಹೊಂದಿರುವ ವ್ಯಕ್ತಿಗಳು ಚಲನಶೀಲತೆಯ ತೊಂದರೆಗೆ ಒಳಪಡುತ್ತಾರೆ. ಪರಿಚಯವಿಲ್ಲದ ಸ್ಥಳಗಳಿಗೆ ಹೋಗಿಬರುವುದು ಮತ್ತು ಅಡೆತಡೆಗಳನ್ನು ಗುರುತಿಸುವುದಕ್ಕೆ ಕಷ್ಟ ಪಡುತ್ತಾರೆ. ಪುಸ್ತಕಗಳು, ಪೋಸ್ಟರ್ ಅಥವಾ ಡಿಜಿಟಲ್ ಪರದೆಗಳಲ್ಲಿನ ವಿಷಯಗಳನ್ನು ಓದುಲು ತೊಂದರೆಗೆ ಒಳಗಾಗಲಿದ್ದಾರೆ. ಶಿಕ್ಷಣ, ಕೆಲಸ ಮತ್ತು ವೃತ್ತಿಪರ ಚಟುವಟಿಕೆಗಳಿಗೆ ಸಹ ಅಂಥವರಿಗೆ ಅಡ್ಡಿಯನ್ನು ಉಂಟು ಮಾಡುತ್ತದೆ ಈ ಎಲ್ಲ ಅಡ್ಡಿ ಆತಂಕಗಳು ಸಾಧನದಿಂದ ನಿವಾರಣೆಯಾಗಲಿದೆ.
ಮುಖಗಳನ್ನು ಗುರುತಿಸುವಲ್ಲಿ ಅಥವಾ ಸಾರ್ವಜನಿಕ ಸಭೆಗಳಲ್ಲಿ ಸಂವಹನ ಮಾಡುವಲ್ಲಿ ಕಡಿಮೆ ದೃಷ್ಟಿಯನ್ನು ಹೊಂದಿದವರೆಗೆ ತೊಂದರೆಯಾಗಲಿದೆ. ಇದು ಒಬ್ಬರ ಅತ್ಮವಿಶ್ವಾಸ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾಗಿದೆ. ಅಂಥವರು ಸಾಮಾಜಿಕವಾಗಿ ಬೆರೆಯಲು ಕೂಡ ಹಿಂಜರಿಯುತ್ತಾರೆ. ಚಿಹ್ನೆಗಳನ್ನು ಓದುವ ಅಥವಾ ಗುರುತಿಸುವ, ಕಿರಾಣಿ ಅಂಗಡಿಯಲ್ಲಿ ಉತ್ಪನ್ನಗಳನ್ನು ಗುರುತಿಸುವಂತಹ ಸಾರ್ವಜನಿಕ ಮಾಹಿತಿಯನ್ನು ತಿಳಿದುಕೊಳ್ಳುವ ಸಾಮರ್ಥ್ಯವೂ ಕೂಡ ದೃಷ್ಟಿ ದೋಷವನ್ನು ಹೊಂದಿರುವವರಲ್ಲಿ ಕಡಿಮೆ ಇರುತ್ತದೆ ಇಂತಹ ಅಡೆತಡೆಗಳನ್ನು ಔರಾ ವಿಷನ್ ತೊಡೆದು ಹಾಕಲಿದೆ.
ಔರಾ ವಿಷನ್ ವೀಕ್ಷಣೆಯ ಕ್ಷೇತ್ರವನ್ನು ವಿಸ್ತರಿಸಿ, ಕೈಗಳ ಸಹಾಯವಿಲ್ಲದೆ ಶಬ್ದದ ಮೂಲಕ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತ್ತದೆ. ವಸ್ತುಗಳು ಮತ್ತು ಪರಿಸರವನ್ನು ಗುರುತಿಸುತ್ತದೆ. ಓದುವುದರಲ್ಲಿ ಮತ್ತು ಕಾಗುಣಿತದಲ್ಲಿ ಸಹಾಯ ಮಾಡಲಿದೆ. ಮಬ್ಬು ಅಥವಾ ಮಸುಕಾದ ದೃಷ್ಟಿ ಹೊಂದಿರುವ ಬಳಕೆದಾರರಿಗೆ ಬಣ್ಣಗಳಲ್ಲಿ ವರ್ಧನೆ ಮತ್ತು ತೀಕ್ಷ್ಣಗೊಳಿಸುವ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಣ್ಣಗಳ ಕುರುಡುತನಕ್ಕೆ ಪರಿಹಾರ ಒದಗಿಸಿ ಓದಲು ಸಹಾಯ ಮಾಡಲಿದೆ. ಇದು ವಿವಿಧ ದೃಷ್ಟಿ ಸಮಸ್ಯೆಗಳಿಗೆ ಸಹ ಪರಿಹಾರ ನೀಡಲಿದೆ ಎಂದು ನಾರಾಯಣ ನೇತ್ರಾಲಯದ ಉಪಾಧ್ಯಕ್ಷ ಹಾಗೂ ನೇತ್ರತಜ್ಞ ಡಾ. ನರೇನ್ ಶೆಟ್ಟಿ ಹೇಳಿದ್ದಾರೆ.
ಔರಾ ವಿಷನ್ ವೈಯಕ್ತಿಕ ಸಹಾಯಕನಾಗಿ ಕಾರ್ಯನಿರ್ವಹಿಸುತ್ತದೆ. ವಸ್ತುಗಳ ಗುರುತಿಸುವಿಕೆ, ಚಲನಶೀಲತೆ ಮತ್ತು ಪರಿಚಯವಿಲ್ಲದ ಪರಿಸರಕ್ಕೆ ಹೊಂದಿಕೊಳ್ಳುವಲ್ಲಿ ಸಹಾಯ ಮಾಡಲಿದೆ. ಈ ಸಾಧನವು ಸ್ವತಂತ್ರವಾಗಿ ಕೆಲಸ ಮಾಡುವುದನ್ನು ಉತ್ತೇಜಿಸುವುದು ಮಾತ್ರವಲ್ಲದೆ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಸಂವಹನಕ್ಕಾಗಿ ಅವಕಾಶಗಳನ್ನು ಸೃಷ್ಟಿಸಲಿದೆ. ಒಟ್ಟಾರೆ ಸುಧಾರಿತ ಜೀವನದ ಗುಣಮಟ್ಟಕ್ಕೆ ಕೊಡುಗೆ ನೀಡಲಿದೆ ಎಂದು ಎಸ್ಎಚ್ಜಿ ತಂತ್ರಜ್ಞಾನಗಳ ಸಿಇಓ ಸಹ ಸಂಸ್ಥಾಪಕ ಸೀತಾರಾಮ್ ಮುತ್ತಂಗಿ ಮಾಹಿತಿ ನೀಡಿದ್ದಾರೆ.