ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನ ಆಗಿದ್ದು, ಆಸೀಸ್ಗೆ ಚಾಂಪಿಯನ್ ಕಿರೀಟ ಬಂದಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಉದಯ್ ಸಹಾರನ್ ನಾಯಕತ್ವದ ಟೀಂ ಇಂಡಿಯಾವನ್ನು ಮಣಿಸಿದ ಆಸ್ಟ್ರೇಲಿಯಾ ಯುವ ಪಡೆ ನಾಲ್ಕನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 254 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಭಾರತ ತಂಡ ಮತ್ತೊಮ್ಮೆ ಫೈನಲ್ ಭಯಕ್ಕೆ ತುತ್ತಾಗಿ 174 ರನ್ಗಳಿಗೆ ಆಲೌಟ್ ಆಗುವ ಮೂಲಕ 79 ರನ್ಗಳ ಹೀನಾಯ ಸೋಲು ಅನುಭವಿಸಿತು. ಈ ಮೂಲಕ ದಾಖಲೆಯ 6ನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶದಿಂದ ವಂಚಿತವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಆರಂಭಿಕ ಸ್ಯಾಮ್ ಕಾನ್ಸ್ಟಾಸ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಕೇವಲ 16 ರನ್ಗಳಿಗೆ ತಂಡದ ಮೊದಲ ವಿಕೆಟ್ ಪತನವಾಯಿತು. ಆದರೆ ಆ ಬಳಿಕ ಜೊತೆಯಾದ ಹ್ಯಾರಿ ಡಿಕ್ಸನ್ 42 ಹಾಗೂ ಹಗ್ ವೈಬ್ಜೆನ್ 48 ರನ್ ಕಲೆಹಾಕುವ ಮೂಲಕ ಅರ್ಧಶತಕದ ಜೊತೆಯಾಟವನ್ನು ನೀಡಿದರು. ಆದರೆ ಇಬ್ಬರೂ ಅರ್ಧಶತಕ ಪೂರ್ಣಗೊಳಿಸುವಲ್ಲಿ ಎಡವಿದರು.
ನಂತರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಹರ್ಜಸ್ ಸಿಂಗ್ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 55 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೆಳಕ್ರಮಾಂಕದಲ್ಲಿ ತಂಡದ ಸ್ಕೋರ್ ಬೋರ್ಡ್ ಹೆಚ್ಚಿಸುವ ಕೆಲಸ ಮಾಡಿದ ಆಲಿ ಪೀಕ್ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 46 ರನ್ ಕಲೆಹಾಕಿದರು. ಭಾರತದ ಪರ ರಾಜ್ ಲಿಂಬಾನಿ 3 ವಿಕೆಟ್ ಪಡೆದರೆ, ನಮನ್ ತಿವಾರಿ 2 ವಿಕೆಟ್, ಉಳಿದಂತೆ ಸೌಮ್ಯ ಕುಮಾರ್ ಪಾಂಡೆ ಹಾಗೂ ಮುಶೀರ್ ಖಾನ್ ತಲಾ 1 ವಿಕೆಟ್ ಪಡೆದರು.
ಆಸ್ಟ್ರೇಲಿಯಾ ನೀಡಿದ 254 ರನ್ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಇಡೀ ಸರಣಿಯಲ್ಲಾದಂತೆ ಫೈನಲ್ ಪಂದ್ಯದಲ್ಲೂ ಆರಂಭಿಕ ಜೋಡಿ ಕಳಪೆ ಆರಂಭ ನೀಡಿತು. ತಂಡ 3 ರನ್ ಗಳಿಸುವಷ್ಟರಲ್ಲಿ ಆರ್ಶಿನ್ ಕುಲಕರ್ಣಿ ರೂಪದಲ್ಲಿ ಮೊದಲ ವಿಕೆಟ್ ಪತನವಾಯಿತು. ಇದರ ನಂತರ ತಾಳ್ಮೆಯ ಆಟಕ್ಕೆ ಮುಂದಾದ ಆದರ್ಶ್ ಸಿಂಗ್ ಮತ್ತು ಮುಶೀರ್ ಖಾನ್ ಮೊದಲ 10 ಓವರ್ಗಳಲ್ಲಿ ಕೇವಲ 28 ರನ್ ಕಲೆಹಾಕಿದರು. ಆದರೆ ರನ್ ಕಲೆಹಾಕಬೇಕಾದ ಒತ್ತಡದಲ್ಲಿದ್ದ ಮುಶೀರ್ ಖಾನ್ 22 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ತಂಡ 40 ರನ್ಗಳಿಗೆ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು.
ಇಲ್ಲಿಂದ, ಟೀಂ ಇಂಡಿಯಾದ ಪೆವಿಲಿಯನ್ ಪರೇಡ್ ಶುರುವಾಯಿತು. ಇದರಲ್ಲಿ ನಾಯಕ ಉದಯ್ ಸಹರಾನ್ 8 ಮತ್ತು ಸಚಿನ್ ದಾಸ್ ಕೇವಲ 9 ರನ್ ಗಳಿಸಿ ಪೆವಿಲಿಯನ್ಗೆ ಮರಳಿದ್ದು, ಭಾರತಕ್ಕೆ ಮರ್ಮಾಘಾತ ನೀಡಿತು. ಏಕೆಂದರೆ ಇಡೀ ಸರಣಿಯಲ್ಲಿ ತಂಡದ ಪರ ಗಮರ್ನಾಹ ಪ್ರದರ್ಶನ ನೀಡಿದ್ದವರಲ್ಲಿ ಈ ಇಬ್ಬರೇ ಪ್ರಮುಖರು. ಈ ಇಬ್ಬರ ವಿಕೆಟ್ ಪತನದ ಬಳಿಕ ಬಂದ ಪ್ರಿಯಾಂಶು ಮೊಲಿಯಾ, ಅರವೆಲ್ಲಿ ಅವನೀಶ್ ಕೂಡ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. 122 ರನ್ ಗಳಿಸುವಷ್ಟರಲ್ಲಿ ತಂಡ ಪ್ರಮುಖ 8 ವಿಕೆಟ್ ಕಳೆದುಕೊಂಡಿತ್ತು. ಇಲ್ಲಿಂದ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಮುರುಗನ್ ಅಭಿಷೇಕ್ 42 ರನ್ಗಳ ಇನ್ನಿಂಗ್ಸ್ ಆಡಿದರೂ ಸಹ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಟೀಂ ಇಂಡಿಯಾ 43.5 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕಿ ಸೋಲೊಪ್ಪಿಕೊಂಡಿತು.