ದೆಹಲಿ : ಆಸ್ಟ್ರೇಲಿಯನ್ ಓಪನ್-2024ರ ಪುರುಷರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತದ ಟೆನಿಸ್ ತಾರೆ, ಕನ್ನಡಿಗ ರೋಹನ್ ಬೋಪಣ್ಣ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಸಾಧನೆಗೆ ವಯಸ್ಸು ಅಡ್ಡಿ ಬರುವುದಿಲ್ಲ ಎಂಬುವುದನ್ನು ರೋಹನ್ ಬೋಪಣ್ಣ ಸಾಬೀತುಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕ ಗೆಲುವು ಸಾಧಿಸಿದ ರೋಹನ್ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಅವರು ನಡೆದು ಬಂದಿರುವ ಹಾದಿ ಸುಂದರವಾಗಿದೆ. ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕ. ಭವಿಷ್ಯದಲ್ಲಿ ರೋಹನ್ ಬೋಪಣ್ಣ ಅವರಿಗೆ ಒಳ್ಳೆಯದಾಗಲಿ ಎಂದು ಪ್ರಧಾನಿ ಮೋದಿ ಶುಭಹಾರೈಸಿದ್ದಾರೆ.
43ನೇ ವಯಸ್ಸಿನಲ್ಲಿ ಸಾಧನೆಗೈದ ಹಿರಿಯ ಆಟಗಾರ
ರೋಹನ್ ಬೋಪಣ್ಣ ಅವರು ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಜಯಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 43ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಆಟಗಾರ
ರೋಹನ್ ಅವರು ತಮ್ಮ ಜೊತೆಗಾರ ಮ್ಯಾಥ್ಯೂ ಎನ್ಡೆನ್ ಜೊತೆಗೆ ಅವರು ಅಂತಿಮ ಪಂದ್ಯದಲ್ಲಿ ಪ್ರತಿಸ್ಪರ್ಧಿ ಸಿಮೊನೆ ಬೊಲಿಲಿ ಹಾಗೂ ಆಂಡ್ರಿಯಾ ಜೋಡಿಯನ್ನು 7-6(7-0), 7-5 ಸೆಟ್ಗಳಿಂದ ಸೋಲಿಸಿದರು. ಲಿಯಾಂಡರ್ ಪೇಸ್ ನಂತರ ಬೋಪಣ್ಣ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.