ಚಿಕಾಗೋ: ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ತೆರಳಿದ್ದ ಹೈದರಾಬಾದ್ ಮೂಲದ ವಿದ್ಯಾರ್ಥಿಯ ಮೇಲೆ ನಾಲ್ವರು ಶಸ್ತ್ರಸಜ್ಜಿತ ಕಳ್ಳರು ಹಲ್ಲೆ ನಡೆಸಿ ದರೋಡೆ ಮಾಡಿರುವ ಘಟನೆ ಚಿಕಾಗೋದಲ್ಲಿ ನಡೆದಿದೆ. ಸದ್ಯ ಹಲ್ಲೆಗೊಳಗಾಗಿರುವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ವರು ಕಳ್ಳರು ತನ್ನನ್ನು ಹೊಡೆದ ತನ್ನ ಬಳಿ ಇದ್ದ ಫೋನ್ ತೆಗೆದುಕೊಂಡಿದ್ದಾರೆ ಎಂದು ಹಲ್ಲೆಗೊಳಗಾದ ವಿದ್ಯಾರ್ಥಿ ಪ್ರತಿಕ್ರಿಯಿಸಿದ್ದಾನೆ.
ಈ ವರ್ಷ ಅಮೆರಿಕದಲ್ಲಿ ನಾಲ್ವರು ಭಾರತೀಯ ಮೂಲದ ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಘಟನೆ ಕಳವಳವನ್ನುಂಟು ಮಾಡಿದೆ. ಹೈದರಾಬಾದ್ ನ ಲಂಗರ್ ಹೌಜ್ ಮೂಲದ ಸೈಯದ್ ಮಜ್ಜರ್ ಅಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಲು ಅಮೆರಿಕದ ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದಾರೆ. ಸದ್ಯ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.