ಭಾರತೀಯ ರೈಲ್ವೆಯ ಆನ್ಲೈನ್ ಟಿಕೆಟ್ ಬುಕಿಂಗ್ ಪೋರ್ಟಲ್ ಐಆರ್ಸಿಟಿಸಿ (ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್) ಷೇರು ಸೋಮವಾರ ಭಾರೀ ಏರಿಕೆ ಕಂಡಿದೆ. ದಿನದ ವಹಿವಾಟು ಮುಕ್ತಾಯದ ವೇಳೆಗೆ ಐಆರ್ಸಿಟಿಸಿಯ ಷೇರು ಸುಮಾರು ಶೇ. 12ರಷ್ಟು ಏರಿಕೆ ಕಂಡಿದ್ದು, 874.55 ರೂ. ಮಟ್ಟವನ್ನು ತಲುಪಿದೆ. ಇದು ಕಳೆದ ಎರಡು ವರ್ಷಗಳಲ್ಲಿ ಷೇರಿನ ಅತ್ಯುನ್ನತ ಮಟ್ಟವಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಐಆರ್ಸಿಟಿಸಿ ಷೇರು ಸಾಕಷ್ಟು ಏರಿಳಿತ ಕಂಡಿದ್ದು, ಜನವರಿ 17, 2022ರಂದು 897 ರೂ.ಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಇದಾದ ನಂತರ ಷೇರುಗಳಲ್ಲಿ ಭಾರೀ ಮಾರಾಟ ಕಂಡುಬಂದಿತ್ತು. ಜುಲೈ 6, 2022ರಂದು ಐಆರ್ಸಿಟಿಸಿ ಷೇರುಗಳು 557 ರೂ.ಗಳ ಮಟ್ಟಕ್ಕೆ ಕುಸಿತ ಕಂಡಿತ್ತು. ಈ ವೇಳೆ ಷೇರುಗಳು ಅದರ ಗರಿಷ್ಠ ಮಟ್ಟದಿಂದ ಶೇ. 38ರಷ್ಟು ಕುಸಿತ ಕಂಡಿದ್ದವು.
ಅಂದಿನಿಂದ, ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ರೈಲ್ವೇ ಸಂಬಂಧಿತ ಷೇರುಗಳು ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿವೆ. ಆದರೆ ಐಆರ್ಸಿಟಿಸಿಯ ಷೇರು ಮಾತ್ರ ಏರಿಕೆ ಕಂಡಿರಲಿಲ್ಲ.
ಆದರೆ ಇತ್ತೀಚಿನ ದಿನಗಳಲ್ಲಿ ಐಆರ್ಸಿಟಿಸಿ ಷೇರಿನಲ್ಲಿ ಮರಳಿ ಖರೀದಿ ಚಟುವಟಿಕೆಗಳು ನಡೆಯುತ್ತಿವೆ. ಹೂಡಿಕೆದಾರರು ಮತ್ತೆ ಷೇರಿನಲ್ಲಿ ಹಣ ಹೂಡುತ್ತಿದ್ದಾರೆ. ಇದರಿಂದ ಕಳೆದ ಒಂದು ತಿಂಗಳಲ್ಲಿ ಷೇರು ಶೇ. 20ರಷ್ಟು ಏರಿಕೆ ಕಂಡಿದೆ. ಈ ಮೂಲಕ 6 ತಿಂಗಳಲ್ಲಿ ಶೇ. 28ರಷ್ಟು ಷೇರು ಏರಿಕೆಯಾಗಿದೆ. ಒಟ್ಟಾರೆ 2023ರಲ್ಲಿ ಷೇರು ಶೇ. 33ರಷ್ಟು ಹೆಚ್ಚಾಗಿದೆ.