ಅಮೆರಿಕದ ಮುಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದಲ್ಲಿ ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ ಅವರಿಗೆ ಮಹತ್ವದ ಹುದ್ದೆ ನೀಡಲಾಗುತ್ತಿದೆ. ಟ್ರಂಪ್ ಸರ್ಕಾರದ ದಕ್ಷತೆ ಇಲಾಖೆಯ (ಡಿಒಜಿಇ) ಹೊಣೆಯನ್ನು ಟ್ವಿಟರ್ ಮಾಲಿಕ ಎಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ ಅವರುಗಳಿಗೆ ನೀಡಲಾಗಿದೆ.
ಇದು ಅವರಿಬ್ಬರೂ ಸರ್ಕಾರದ ಹೊರಗಿದ್ದುಕೊಂಡೇ ನಿರ್ವಹಿಸಬೇಕಾದ ಹುದ್ದೆಯಾಗಿದೆ. ಸೇವ್ ಅಮೆರಿಕ ಚಳವಳಿಗೆ ಅಗತ್ಯವಿರುವ ಸರಕಾರಿ ಅಧಿಕಾರಶಾಹಿಯನ್ನು ಇಲ್ಲವಾಗಿಸಲು, ವಿಪರೀತ ನಿಯಂತ್ರಣಗಳನ್ನು ಕಡಿಮೆ ಮಾಡಲು, ವ್ಯರ್ಥ ವೆಚ್ಚಗಳಿಗೆ ಕತ್ತರಿ ಹಾಕಲು ಮತ್ತು ಫೆಡರಲ್ ಸಂಸ್ಥೆಗಳನ್ನು ಮರುರಚನೆ ಮಾಡಲು ಇವರಿಬ್ಬರೂ ಸರ್ಕಾರಕ್ಕೆ ನೆರವಾಗಲಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕನ್ನರ ಜೀವನ ಉತ್ತಮಗೊಳಿಸಲು ಎಲಾನ್ ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಅವರು ತರುವ ಬದಲಾವಣೆಗಳಿಗಾಗಿ ಎದುರು ನೋಡುತ್ತಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
ಎಲಾನ್ ಮಸ್ಕ್ ಗೆ ಈ ಹುದ್ದೆ ನೀಡುವ ಬಗ್ಗೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿಯೇ ಟ್ರಂಪ್ ಸುಳಿವು ನೀಡಿದ್ದರು. ವಿವೇಕ್ ರಾಮಸ್ವಾಮಿ ಅವರಿಗೂ ಉನ್ನತ ಹುದ್ದೆ ಸಿಗಲಿರುವುದರ ಬಗ್ಗೆ ನಿರೀಕ್ಷೆ ಇತ್ತು. ಎಲಾನ್ ಮಸ್ಕ್ ಟೆಸ್ಲಾ ಹಾಗೂ ಸಾಮಾಜಿಕ ಮಾಧ್ಯಮ ʼಎಕ್ಸ್ʼ ನ ಮಾಲಕರಾಗಿದ್ದರೆ, ರಾಮಸ್ವಾಮಿ ಫಾರ್ಮಾಸ್ಯುಟಿಕಲ್ ಕಂಪನಿಯ ಸ್ಥಾಪಕರಾಗಿದ್ದಾರೆ.
ವಿವೇಕ್ ರಾಮಸ್ವಾಮಿ ಉದ್ಯಮ ಮತ್ತು ರಾಜಕೀಯ ಕ್ಷೇತ್ರಗಳೆರಡರಲ್ಲೂ ಹೆಸರು ಮಾಡಿದ್ದಾರೆ. ರಾಮಸ್ವಾಮಿ ಕಳೆದ ವರ್ಷ 2024 ರ ಅಧ್ಯಕ್ಷೀಯ ರೇಸ್ಗೆ ರಿಪಬ್ಲಿಕನ್ ಅಭ್ಯರ್ಥಿಯಾಗಿ ಪ್ರವೇಶಿಸಿದ್ದರು, ಅಸಾಂಪ್ರದಾಯಿಕ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದ ಅವರು ಬಳಿಕ ಕಣದಿಂದ ಹಿಂದೆ ಸರಿದು ಟ್ರಂಪ್ ಅನ್ನು ಬೆಂಬಲಿಸಲು ನಿರ್ಧರಿಸಿದರು.
ಓಹಿಯೋದ ಸಿನ್ಸಿನಾಟಿಯಲ್ಲಿ 1985ರ ಆಗಸ್ಟ್ 9ರಂದು ಜನಿಸಿದ ವಿವೇಕ್ ರಾಮಸ್ವಾಮಿ, ಬಯೋಟೆಕ್ ಉದ್ಯಮಿ, ಲೇಖಕರಾಗಿ ಹೆಸರಾಗಿದ್ದಾರೆ.
ರಾಮಸ್ವಾಮಿ ಅವರ ತಮಿಳು ಮಾತಾಡುವ ಬ್ರಾಹ್ಮಣ ಪೋಷಕರು 1970ರ ದಶಕದಲ್ಲಿ ಕೇರಳದ ಪಾಲಕ್ಕಾಡ್ ನಿಂದ ಅಮೆರಿಕೆಗೆ ವಲಸೆ ಹೋಗಿದ್ದವರು. ಪಾಲಕ್ಕಾಡ್ ನ ವಡಕ್ಕನ್ ಚೇರಿಯ ಸಾಂಪ್ರದಾಯಿಕ ಅಗ್ರಹಾರದಲ್ಲೇ ಅವರ ಮನೆಯಿತ್ತು. ತಾಯಿ ಗೀತಾ ರಾಮಸ್ವಾಮಿ ಜೆರಿಯಾಟ್ರಿಕ್ ಮನೋವೈದ್ಯೆಯಾಗಿದ್ದರು, ತಂದೆ ವಿ ಗಣಪತಿ ರಾಮಸ್ವಾಮಿ ಜನರಲ್ ಎಲೆಕ್ಟ್ರಿಕ್ನಲ್ಲಿ ಎಂಜಿನಿಯರ್ ಮತ್ತು ಪೇಟೆಂಟ್ ವಕೀಲರಾಗಿ ಕೆಲಸ ಮಾಡಿದ್ದರು.
ರಾಮಸ್ವಾಮಿ ರಾಷ್ಟ್ರೀಯ ಶ್ರೇಯಾಂಕದ ಜೂನಿಯರ್ ಟೆನಿಸ್ ಆಟಗಾರನೂ ಆಗಿದ್ದರು ಮತ್ತು ಶೈಕ್ಷಣಿಕವಾಗಿಯೂ ಮುಂದಿದ್ದರು. ಅವರು 2007ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ನಂತರ ಹೆಡ್ಜ್ ಫಂಡ್ನಲ್ಲಿ ಕೆಲಸ ಮಾಡಿ, ಏಳು ವರ್ಷಗಳಲ್ಲಿ 7 ಮಿಲಿಯನ್ ಡಾಲರ್ ಗಳಿಸಿದರು.
ಯೇಲ್ ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿಯನ್ನೂ ಪಡೆದಿದ್ದಾರೆ. 2014ರಲ್ಲಿ 29ನೇ ವಯಸ್ಸಿನಲ್ಲಿ ರಾಮಸ್ವಾಮಿ ಅವರು ರೋವಂಟ್ ಸೈನ್ಸಸ್ ಎಂಬ ಔಷಧೀಯ ಕಂಪನಿ ಸ್ಥಾಪಿಸಿದರು. 2023ರ ಹೊತ್ತಿಗೆ ಅವರು ತಮ್ಮ ವ್ಯಾಪಾರ ಉದ್ಯಮಗಳಿಂದ ಕನಿಷ್ಠ 250 ಮಿಲಿಯನ್ ಡಾಲರ್ ಸಂಪತ್ತಿಗೆ ಒಡೆಯರಾಗಿದ್ದರು.