ವಾಷಿಂಗ್ಟನ್: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ ನಿರ್ದೇಶಕರಾಗಿ ಭಾರತ ಮೂಲದ ಕಾಶ್ ಪಟೇಲ್ ನೇಮಕಗೊಂಡಿದ್ದಾರೆ. ಎಫ್ಬಿಐನ 9ನೇ ನಿರ್ದೇಶಕರಾಗಿ ಕಾಶ್ ಪಟೇಲ್ ಅವರನ್ನು ನೇಮಕಗೊಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಸಹಿ ಹಾಕಿದ್ದು, ಈ ಮಾಹಿತಿಯನ್ನು ಶ್ವೇತಭವನದ ಅಧಿಕಾರಿ ಡಾನ್ ಸ್ಕ್ಯಾವಿನೋ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ ನಿರ್ದೇಶಕರಾಗಿ ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ಕಾಶ್ ಪಟೇಲ್, ಟ್ರಂಪ್ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಎಫ್ಬಿಐನ 9ನೇ ನಿರ್ದೇಶಕನಾಗಿದ್ದಕ್ಕೆ ನನಗೆ ಗೌರವವಿದೆ. ನಿಮ್ಮ ಅಚಲವಾದ ವಿಶ್ವಾಸ ಮತ್ತು ಬೆಂಬಲಕ್ಕಾಗಿ ಟ್ರಂಪ್ ಹಾಗೂ ಅಟಾರ್ನಿ ಜನರಲ್ ಬೋಂಡಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಮುಂದುವರಿದು.. ಎಫ್ಬಿಐ ಒಂದು ಪರಂಪರೆಯನ್ನು ಹೊಂದಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ನಮ್ಮ ನ್ಯಾಯ ವ್ಯವಸ್ಥೆಯು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಂಡಿದೆ, ಈ ಬೆಳವಣಿಗೆ ಇಂದೇ ಕೊನೆಗೊಳ್ಳಬೇಕು. ಅಮೆರಿಕನ್ನರು ಹೆಮ್ಮೆ ಪಡುವಂತೆ ಎಫ್ಬಿಐ ಅನ್ನು ಮರುನಿರ್ಮಾಣ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ. ಅಲ್ಲದೇ ಇದನ್ನು ನಮ್ಮ ಎಚ್ಚರಿಕೆ ಎಂದೇ ಭಾವಿಸಿ ಅಮೆರಿಕನ್ನರಿಗೆ ಹಾನಿ ಮಾಡಲು ಬಯಸುವವರು ಯಾವುದೇ ಮೂಲೆಯಲ್ಲಿದ್ದರೂ ಹುಡುಕಿ ಬೇಟೆಯಾಡುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಕಾಶ್ ಪಟೇಲ್ ತಂದೆ-ತಾಯಿ ಗುಜರಾತ್ ಮೂಲದವರು. ಪಟೇಲ್ ಪೋಷಕರು ಅಮೆರಿಕದಲ್ಲಿ ನೆಲೆಸುವುದಕ್ಕಿಂತ ಮೊದಲು ಉಗಾಂಡದಲ್ಲಿದ್ದರು. ಅಲ್ಲಿಂದ ಕೆನಡಾಗೆ ಬಂದರು. ಈ ವೇಳೆ ಕಾಶ್ ಪಟೇಲ್ ತಂದೆಗೆ ಅಮೆರಿಕ ವಿಮಾನಯಾನ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿ ಕೆಲಸ ಸಿಕ್ಕಿದ್ದರಿಂದ ಅವರು ಕುಟುಂಬ ಸಮೇತರಾಗಿ ಅಮೆರಿಕಾಗೆ ಬಂದು ನೆಲೆಸಿದರು.